
ದುಬೈ: ಅಜೇಯ ದಾಖಲೆಯೊಂದಿಗೆ ಫೈನಲ್ ಪ್ರವೇಶಿಸಿರುವ ಭಾರತ ತಂಡ ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂದು ಬಲಿಷ್ಠ ನ್ಯೂಜಿಲೆಂಡ್ ತಂಡದ ಸವಾಲು ಎದುರಿಸಲಿದೆ.
ಆತಿಥ್ಯವಹಿಸಿರುವ ಪಾಕಿಸ್ತಾನ ಟೂರ್ನಿಯಿಂದ ಗುಂಪು ಹಂತದಲ್ಲಿಯೇ ನಿರ್ಗಮಿಸಿದೆ. ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕದನಕ್ಕೆ ಹೈವೋಲ್ಟೇಜ್ ಸ್ಪರ್ಶ ಸಿಕ್ಕಿದೆ. ಹೈಬ್ರಿಡ್ ಮಾದರಿಯಲ್ಲಿ ಆತಿಥ್ಯದ ಅವಕಾಶ ಪಡೆದ ಅರಬ್ ನಾಡಿನಲ್ಲಿ 12 ವರ್ಷಗಳ ನಂತರ ಟ್ರೋಫಿಗೆ ಮುತ್ತಿಡಲು ಟೀಂ ಇಂಡಿಯಾ ಸಜ್ಜಾಗಿದೆ.
ಆದರೆ, ಐಸಿಸಿ ಟೂರ್ನಿಗಳ ಎಲ್ಲಾ ಪಂದ್ಯಗಳಲ್ಲಿ ಭಾರತದ ವಿರುದ್ಧ 10-6 ಅಂತರದ ಮುನ್ನಡೆಯಲ್ಲಿರುವ ಕಿವೀಸ್ ತಂಡವನ್ನು ಭಾರತ ಯಾವುದೇ ಕಾರಣಕ್ಕೂ ಕಡೆಗಣಿಸುವಂತಿಲ್ಲ.
ಭಾರತ ತಂಡ ಪ್ರಶಸ್ತಿ ಗೆದ್ದರೆ ಚಾಂಪಿಯನ್ ಟ್ರೋಫಿಯಲ್ಲಿ ಮೂರು ಪ್ರಶಸ್ತಿ ಗೆದ್ದ ಮೊದಲ ತಂಡ ಎನಿಸಲಿದೆ. ಸದ್ಯ ತಲಾ ಎರಡು ಬಾರಿ ಗೆದ್ದಿರುವ ಭಾರತ ಮತ್ತು ಆಸ್ಟ್ರೇಲಿಯಾ ಜಂಟಿ ಅಗ್ರಸ್ಥಾನದಲ್ಲಿವೆ.
ಕಳೆದ 14 ಐಸಿಸಿ ಟೂರ್ನಿಗಳ ಪೈಕಿ ಭಾರತ 12ರಲ್ಲಿ ನಾಕೌಟ್ ಹಂತಕ್ಕೇರಿದ್ದು ಮೂರರಲ್ಲಿ ಮಾತ್ರ ಗೆದ್ದಿದೆ.
2011 ರಿಂದ ಆಡಿದ 8 ಐಸಿಸಿ ಟೂರ್ನಿಗಳ ಪೈಕಿ ನ್ಯೂಜಿಲೆಂಡ್ 1ರಲ್ಲಿ ಮಾತ್ರ ಯಶಸ್ವಿಯಾಗಿದೆ.
ಇಂದಿನ ಫೈನಲ್ ನಲ್ಲಿ ವಿಜೇತ ಚಾಂಪಿಯನ್ ತಂಡಕ್ಕೆ 19.5 ಕೋಟಿ ರೂಪಾಯಿ ಬಹುಮಾನ ಸಿಗಲಿದೆ.
ರನ್ನರ್ ಅಪ್ ತಂಡಕ್ಕೆ 9.7 ಕೋಟಿ ರೂ., ಸೆಮಿಫೈನಲ್ ನಲ್ಲಿ ಅಭಿಯಾನ ಮುಗಿಸಿದ ತಂಡಗಳಿಗೆ 4.9 ಕೋಟಿ ರೂಪಾಯಿ ಬಹುಮಾನ ನೀಡಲಾಗುವುದು.
ಚಾಂಪಿಯನ್ ಟ್ರೋಫಿಯಲ್ಲಿ ಅತ್ಯಧಿಕ 791 ರನ್ ಗಳಿಸಿರುವ ಕ್ರಿಸ್ ಗೇಲ್ ಅವರ ದಾಖಲೆ ಮುರಿಯಲು ವಿರಾಟ್ ಕೊಹ್ಲಿಗೆ(746) 45 ರನ್ ಗಳು ಬೇಕಿದೆ.
ಭಾರತ ನ್ಯೂಜಿಲೆಂಡ್ ನಡುವಿನ ಚಾಂಪಿಯನ್ ಟ್ರೋಫಿ ಫೈನಲ್ ಫೈಟ್ ಫಲಿತಾಂಶಕ್ಕಾಗಿ ಜಗತ್ತಿನ ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಧ್ಯಾಹ್ನ 2:30ಕ್ಕೆ ಪಂದ್ಯ ಆರಂಭವಾಗಲಿದೆ. ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಏಕದಿನ ಪಂದ್ಯಗಳಲ್ಲಿ 119 ಬಾರಿ ಮುಖಾಮುಖಿಯಾಗಿದ್ದು, 61 ಬಾರಿ ಭಾರತ, 50 ಬಾರಿ ನ್ಯೂಜಿಲೆಂಡ್ ಜಯಗಳಿಸಿವೆ. ಒಂದು ಪಂದ್ಯ ಟೈ ಆಗಿದ್ದು, 7 ಪಂದ್ಯಗಳ ಫಲಿತಾಂಶ ಪ್ರಕಟವಾಗಿಲ್ಲ.