
ಬೈರುತ್: ಸಿರಿಯಾದ ಕರಾವಳಿ ಪ್ರದೇಶಗಳಲ್ಲಿ ಸರ್ಕಾರಿ ಪಡೆಗಳೊಂದಿಗಿನ ಘರ್ಷಣೆಯಲ್ಲಿ ಪದಚ್ಯುತ ಅಧ್ಯಕ್ಷ ಬಷರ್ ಅಸ್ಸಾದ್ ಅವರ 200 ಕ್ಕೂ ಹೆಚ್ಚು ಬೆಂಬಲಿಗರು ಸಾವನ್ನಪ್ಪಿದ್ದಾರೆ.
ಇದು ಡಿಸೆಂಬರ್ ಆರಂಭದಲ್ಲಿ ಇಸ್ಲಾಮಿಸ್ಟ್ ಗುಂಪು ಹಯಾತ್ ತಹ್ರಿರ್ ಅಲ್-ಶಾಮ್ ನೇತೃತ್ವದ ದಂಗೆಕೋರ ಗುಂಪುಗಳಿಂದ ಅಸ್ಸಾದ್ ಸರ್ಕಾರವನ್ನು ಉರುಳಿಸಿದ ನಂತರದ ಅತ್ಯಂತ ದೊಡ್ಡ ಹಿಂಸಾಚಾರವಾಗಿದೆ.
ಸಿರಿಯಾದ ಹೊಸ ಸರ್ಕಾರದ ಜೊತೆಗಿರುವ ಸಶಸ್ತ್ರ ಪಡೆಗಳು ದೇಶದ ಕರಾವಳಿಯ ಸಮೀಪವಿರುವ ಹಲವಾರು ಹಳ್ಳಿಗಳಿಗೆ ನುಗ್ಗಿದವು. ಅಸ್ಸಾದ್ ನಿಷ್ಠಾವಂತರು ಸರ್ಕಾರಿ ಭದ್ರತಾ ಪಡೆಗಳ ಮೇಲೆ ಇತ್ತೀಚೆಗೆ ನಡೆಸಿದ ದಾಳಿಗಳಿಗೆ ಪ್ರತಿಕ್ರಿಯೆಯಾಗಿ ಡಜನ್ ಗಟ್ಟಲೆ ಪುರುಷರನ್ನು ನಿರ್ಮೂಲನೆ ಮಾಡಿವೆ.
ಸರ್ಕಾರಿ ಪಡೆಗಳ ನೇತೃತ್ವದಲ್ಲಿ ಗುರುವಾರ ಹಳ್ಳಿಗಳ ಮೇಲೆ ದೊಡ್ಡ ಮಟ್ಟದ ದಾಳಿಗಳು ನಡೆದವು ಮತ್ತು ಶುಕ್ರವಾರದವರೆಗೂ ಮುಂದುವರೆಯಿತು. ಯುದ್ಧ ಆರಂಭವಾದಾಗಿನಿಂದ 200 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಬ್ರಿಟನ್ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಹಳ್ಳಿಗಳಲ್ಲಿ ಸೇಡಿನ ದಾಳಿಯಲ್ಲಿ ಸುಮಾರು 140 ಜನರು ಸಾವನ್ನಪ್ಪಿದ್ದಾರೆ. ಸತ್ತವರಲ್ಲಿ ಸಿರಿಯಾ ಸರ್ಕಾರಿ ಪಡೆಗಳ ಕನಿಷ್ಠ 50 ಸದಸ್ಯರು ಮತ್ತು ಅಸ್ಸಾದ್‌ಗೆ ನಿಷ್ಠರಾಗಿರುವ 45 ಹೋರಾಟಗಾರರು ಸೇರಿದ್ದಾರೆ.
ಬ್ರಿಟನ್ ಮೂಲದ ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯದ ಪ್ರಕಾರ, ಗುರುವಾರ ಕರಾವಳಿ ನಗರವಾದ ಜಬ್ಲೆಹ್ ಬಳಿ ಸರ್ಕಾರಿ ಪಡೆಗಳು ಬೇಕಾಗಿರುವ ವ್ಯಕ್ತಿಯನ್ನು ಬಂಧಿಸಲು ಪ್ರಯತ್ನಿಸಿದಾಗ ಮತ್ತು ಅಸ್ಸಾದ್ ಬೆಂಬಲಿಗರು ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಸರ್ಕಾರಿ ಪಡೆಗಳು ದಾಳಿ ಮಾಡಿವೆ. ಗುರುವಾರ ಮತ್ತು ಶುಕ್ರವಾರ, ಹೊಸ ಸರ್ಕಾರಕ್ಕೆ ನಿಷ್ಠರಾಗಿರುವ ಬಂದೂಕುಧಾರಿಗಳು ಕರಾವಳಿಯ ಸಮೀಪವಿರುವ ಶೀರ್, ಮುಖ್ತಾರಿಯೆಹ್ ಮತ್ತು ಹಫಾ ಗ್ರಾಮಗಳಿಗೆ ನುಗ್ಗಿ 69 ಪುರುಷರನ್ನು ಕೊಂದರು ಆದರೆ ಯಾವುದೇ ಮಹಿಳೆಯರಿಗೆ ಹಾನಿ ಮಾಡಲಿಲ್ಲ ಎಂದು ವೀಕ್ಷಣಾಲಯ ತಿಳಿಸಿದೆ.
ಮಾರ್ಚ್ 2011 ರಿಂದ ಸಿರಿಯಾದಲ್ಲಿ ನಡೆಯುತ್ತಿರುವ ಅಂತರ್ಯುದ್ಧವು ಅರ್ಧ ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದೆ.