
ಬೆಂಗಳೂರು: ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಶಿಕ್ಷಣ ತಜ್ಞ ಪ್ರೊ.ಎಂ.ಆರ್. ದೊರೆಸ್ವಾಮಿ(89) ಗುರುವಾರ ನಿಧನರಾಗಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಯಿಂದ ಮನೆಯಲ್ಲಿ ಹಲವು ದಿನಗಳಿಂದ ವಿಷಯದಂತೆ ಪಡೆಯುತ್ತಿದ್ದ ಅವರು ನಿಧನರಾಗಿದ್ದಾರೆ. ಪೊಲೀಸ್ ಗೌರವಗಳೊಂದಿಗೆ ಶುಕ್ರವಾರ ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು.
ವಿಧಾನ ಪರಿಷತ್ ಸದಸ್ಯರಾಗಿ, ಎರಡು ಬಾರಿ ಸರ್ಕಾರದ ಶೈಕ್ಷಣಿಕ ಸುಧಾರಣೆಗಳ ಸಲಹೆಗಾರರಾಗಿ ಸಂಪುಟ ದರ್ಜೆಯ ಸ್ಥಾನಮಾನದೊಂದಿಗೆ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ ಕ್ಷೇತ್ರದ ಸುಧಾರಣೆಗಾಗಿ ಶಿಕ್ಷಕರಾಗಿ, ಮಾರ್ಗದರ್ಶಕರು, ಸಲಹೆಗಾರರಾಗಿ ನಿರಂತರ ಸೇವೆ ಸಲ್ಲಿಸಿದ್ದಾರೆ.
ಶಾಲಾ ಹಂತದಿಂದ ವಿಶ್ವವಿದ್ಯಾಲಯದ ಮಟ್ಟಕ್ಕೆ ಪಿಇಎಸ್ ಶಿಕ್ಷಣ ಸಂಸ್ಥೆ ಕೊಂಡೊಯ್ದಿದ್ದಾರೆ. ಪ್ರತಿವರ್ಷ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಕೋಟ್ಯಂತರ ರೂ. ವಿದ್ಯಾರ್ಥಿ ವೇತನ ನೀಡುತ್ತಿದ್ದರು. ವಿವಿಧ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿದ್ದರು.
ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ. ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ರಾಜಕೀಯ, ಶಿಕ್ಷಣ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಯಡಿಯೂರಪ್ಪ, ಸಚಿವರಾದ ಚಲುವರಾಯಸ್ವಾಮಿ, ಡಾ.ಎಂ.ಸಿ. ಸುಧಾಕರ್ ಗುರುವಾರ ರಾತ್ರಿ ಮೃತರ ನಿವಾಸಕ್ಕೆ ತೆರಳಿ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ.