
ದಾವಣಗೆರೆ: ಎಸ್.ಎಸ್.ಎಲ್.ಸಿ.ಯಿಂದ ಪದವಿ, ಸ್ನಾತಕೋತ್ತರ ಪದವಿ ಸೇರಿದಂತೆ ಐಟಿಐ, ಡಿಪ್ಲೊಮಾ, ಇಂಜಿನಿಯರಿಂಗ್ ವೃತ್ತಿಪರ ಕೋರ್ಸ್‍ಗಳನ್ನು ಪಡೆದವರಿಗೆ ವಿವಿಧ ಕಂಪನಿಗಳಿಗೆ ಅವಶ್ಯವಿರುವ 3 ಸಾವಿರ ಹುದ್ದೆಗಳ ಭರ್ತಿಗೆ ಮಾರ್ಚ್ 15 ರಂದು ಜಿಲ್ಲಾ ಮಟ್ಟದ ಬೃಹತ್ ಉದ್ಯೋಗ ಮೇಳ ಏರ್ಪಡಿಸಿದ್ದು, ಜಿಲ್ಲೆಯ ಯುವಕ, ಯುವತಿಯರು ಇದರ ಲಾಭ ಪಡೆಯಬೇಕೆಂದು ಸಂಸದೆ ಡಾ; ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದರು.
ಉದ್ಯೋಗ ಮೇಳದ ಪೋಸ್ಟರ್ ಅನ್ನು ಮಂಗಳವಾರ ಗೃಹ ಕಚೇರಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಹದಡಿ ರಸ್ತೆಯಲ್ಲಿನ ಸರ್ಕಾರಿ ಐಟಿಐ ಕಾಲೇಜು ಆವರಣದಲ್ಲಿ ಉದ್ಯೋಗ ಮೇಳ ಏರ್ಪಡಿಸಲಾಗಿದೆ ಎಂದರು.
ದಾವಣಗೆರೆ ನಗರ ಜವಳಿ ಕ್ಷೇತ್ರದಲ್ಲಿ ಪ್ರಸಿದ್ದಿಯನ್ನು ಪಡೆಯುವ ಮೂಲಕ ಮ್ಯಾಚೇಸ್ಟರ್ ಎಂದೇ ಹೆಸರು ಗಳಿಸಿತ್ತು. ಈಗ ಶಿಕ್ಷಣ ಕ್ಷೇತ್ರದಲ್ಲಿ ಹೆಸರು ಪಡೆದಿದೆ. ದಾವಣಗೆರೆ ಐಟಿಐನಿಂದ ಡಿಪ್ಲೊಮಾ, ಇಂಜಿನಿಯರಿಂಗ್, ಮೆಡಿಕಲ್ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಹೊಂದಿದೆ. ಜೊತೆಗೆ ಕೃಷಿಯಲ್ಲಿಯೂ ಜಿಲ್ಲೆ ಸಾಕಷ್ಟು ಅಭಿವೃದ್ದಿ ಹೊಂದಿದೆ ಎಂದರು.
ಉನ್ನತ ಶಿಕ್ಷಣ ಪಡೆದವರು ಉದ್ಯೋಗಕ್ಕಾಗಿ ಹೊರ ದೇಶಗಳಿಗೆ ಹೋಗಲಿದ್ದು ಇಲ್ಲಿನ ಮಾನವ ಸಂಪನ್ಮೂಲ ಬೇರೆ ಕಡೆ ಬಳಕೆಯಾಗುವ ಬದಲು ಇಲ್ಲಿಯೇ ಬಳಕೆಯಾಗುವುದರಿಂದ ಇನ್ನಷ್ಟು ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ. ಇಂತಹ ಬೃಹತ್ ಉದ್ಯೋಗ ಮೇಳಗಳ ಮೂಲಕ ಜಿಲ್ಲೆಯ ಯುವಕ, ಯುವತಿಯರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ರೇಷ್ಮ ಕೌಸರ್, ಕೌಶಲ್ಯಾಭಿವೃದ್ದಿ ಅಧಿಕಾರಿ ಶಿವಕುಮಾರ್, ಜಿಲ್ಲಾ ಉದ್ಯೋಗಾಧಿಕಾರಿ ರವೀಂದ್ರ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.