ಮಧ್ಯ ಪ್ರದೇಶದ ಇಂದೋರ್ ನ ಖ್ಯಾತ ನೇತ್ರತಜ್ಞ ಡಾ. ಅನುರಾಗ್ ಶ್ರೀವಾಸ್ತವ್, ಸೋಮವಾರ ಬೆಳಗ್ಗೆ ಬ್ಯಾಡ್ಮಿಂಟನ್ ಆಡುವಾಗ ಉಸಿರಾಟದ ತೊಂದರೆಯಿಂದ ನಿಧನರಾದರು. ಸಹ ವೈದ್ಯರು ತಕ್ಷಣವೇ ಸಿಪಿಆರ್ ನೀಡಿದರೂ, ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ದುರ್ಘಟನೆ ವೈದ್ಯ ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ.
64 ವರ್ಷದ ಡಾ. ಶ್ರೀವಾಸ್ತವ್, ಬ್ಯಾಡ್ಮಿಂಟನ್ ಆಟದಲ್ಲಿ ಆಸಕ್ತಿ ಹೊಂದಿದ್ದು, ಪ್ರತಿದಿನ ಬೆಳಗ್ಗೆ ಸಯಾಜಿ ಕ್ಲಬ್‌ನಲ್ಲಿ ಆಡುವ ಅಭ್ಯಾಸ ಮಾಡುತ್ತಿದ್ದರು. ಸೋಮವಾರ ಬೆಳಗ್ಗೆ, ಎರಡು ಸುತ್ತುಗಳ ಆಟದ ನಂತರ, ಅವರು ಕುಳಿತುಕೊಂಡಾಗ ದಣಿದಂತೆ ಕಾಣುತ್ತಿದ್ದರು. ಅವರ ಆಪ್ತ ಸ್ನೇಹಿತ ವಿಕ್ರಮ್ ಗುಪ್ತೆ, ತಕ್ಷಣವೇ ಸಿಪಿಆರ್ ನೀಡಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದ್ದಾರೆ.
ಡಾ. ಶ್ರೀವಾಸ್ತವ್ ಅವರನ್ನು ಮೆಡಾಂಟಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಡಾ. ಶ್ರೀವಾಸ್ತವ್ ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಹಿರಿಯ ಮಗ ಸ್ವೀಡನ್‌ನಲ್ಲಿ ಸ್ಟಾರ್ಟ್-ಅಪ್ ನಡೆಸುತ್ತಿದ್ದರೆ, ಕಿರಿಯ ಮಗ ಡಾ. ಪ್ರಾಂಜಲ್, ಸೇನೆಯಲ್ಲಿ ಕ್ಯಾಪ್ಟನ್ ಆಗಿದ್ದು, ಸುದ್ದಿ ತಿಳಿದ ಕೂಡಲೇ ಭೋಪಾಲ್‌ನಿಂದ ಇಂದೋರ್‌ಗೆ ಧಾವಿಸಿದರು. ಸ್ನೇಹಿತ ಸಿಎ ವಿಕ್ರಮ್ ಗುಪ್ತೆ, ಡಾ. ಶ್ರೀವಾಸ್ತವ್‌ಗೆ ಈ ಹಿಂದೆ ಹೃದಯ ಸಂಬಂಧಿತ ಸಮಸ್ಯೆಗಳು ಇರಲಿಲ್ಲ. ಅವರು ಕೆಲವು ತಿಂಗಳ ಹಿಂದೆ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು ಆದರೆ ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳಿರಲಿಲ್ಲ ಎಂದು ತಿಳಿಸಿದರು.
ಮರಣದ ಒಂದು ದಿನ ಮೊದಲು, ಡಾ. ಅನುರಾಗ್ ಶ್ರೀವಾಸ್ತವ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ, “ಹಳೆಯದು ಹೋಗದಿದ್ದರೆ, ಹೊಸದು ಹೇಗೆ ಬರುತ್ತದೆ ? ಮರವು ಹಳದಿ ಎಲೆಗಳನ್ನು ಎಷ್ಟು ಕಾಲ ಹಿಡಿದಿಟ್ಟುಕೊಳ್ಳುತ್ತದೆ ?” ಎಂಬ ಅರ್ಥಗರ್ಭಿತ ಸಂದೇಶವನ್ನು ಪೋಸ್ಟ್ ಮಾಡಿದ್ದರು.
ಕುಟುಂಬದ ಒಪ್ಪಿಗೆಯೊಂದಿಗೆ, ಡಾ. ಶ್ರೀವಾಸ್ತವ್ ಅವರ ನೇತ್ರಗಳನ್ನು ಎಂವೈ ಆಸ್ಪತ್ರೆಯಲ್ಲಿ ದಾನ ಮಾಡಲಾಗುತ್ತಿದೆ, ಇದು ಅವರ ಮಾನವೀಯ ಮುಖಕ್ಕೆ ಸಾಕ್ಷಿಯಾಗಿದೆ.