
ಮಂಗಳೂರು: ಮಹಿಳಾ ಅಧಿಕಾರಿಯೊಬ್ಬರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬ ಮಂಗಳೂರಿನ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶ ಮೂಲದ ಅಭಿಷೇಕ್ ಸಿಂಗ್ ಆತ್ಮಹತ್ಯೆ ಶರಣಾಗಿರುವ ವ್ಯಕ್ತಿ. ಚೆನ್ನ್ನೈನಲ್ಲಿ ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಅಭಿಷೇಕ್ ಸಿಂಗ್ ಮಂಗಳೂರಿಗೆ ಬಂದು ಲಾಡ್ಜ್ ವೊಂದರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಇನ್ ಸ್ಟಾ ಗ್ರಾಂ ನಲ್ಲಿ ವಿಡಿಯೋವೊಂದನ್ನು ಅಪ್ ಲೋಡ್ ಮಾಡಿದ್ದು, ಮಹಿಳಾ ಅಧಿಕಾರಿಯೊಬ್ಬರ ವಿರುದ್ಧ ಸಾಲು ಸಾಲು ಆರೋಪ ಮಾಡಿದ್ದಾರೆ. ಅಲ್ಲದೇ ಕೆಲ ವಿಡಿಯೋ, ಫೋಟೋಗಳನ್ನು ಅಪ್ ಲೋಡ್ ಮಾಡಿದ್ದಾರೆ.
ಸಿಐಎಸ್ ಎಫ್ ನ ಮಹಿಳಾ ಅಸಿಸ್ಟೆಂಟ್ ಕಮಾಂಡೆಂಟ್ ತನಗೆ ಮೋಸ ಮಾಡಿದ್ದಾಗಿ ಆರೋಪಿಸಿದ್ದಾರೆ. ಪ್ರೀತಿ-ಪ್ರೇಮದ ಹೆಸರಲ್ಲಿ ತನ್ನನ್ನು ಸೆಕ್ಸ್ ಗೆ ಬಳಸಿಕೊಂಡು ಮೋಸ ಮಾಡಿದ್ದಾಗಿ ಅಭಿಷೇಕ್ ಆರೋಪಿಸಿದ್ದಾರೆ. ಈ ಬಗ್ಗೆ ವಿಡಿಯೋ ಮಾಡಿಟ್ಟು ಲಾಡ್ಜ್ ನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಮಂಗಳೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಉತ್ತರ ಪ್ರದೇಶದಲ್ಲಿರುವ ಅಭಿಷೇಕ್ ಸಿಂಗ್ ಪೋಷಕರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.