
ಬೆಂಗಳೂರು: ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡ ಚಿತ್ರರಂಗದ ನಟ-ನಟಿಯರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ವಾರ್ನಿಂಗ್ ಕೊಟ್ಟಿದ್ದರು. ನಟ್ಟು-ಬೋಲ್ಟು ಟೈಟ್ ಮಾಡಬೇಕು. ನಿಮ್ಮದೇ ಚಿತ್ರರಂಗದ ಕಾರ್ಯಕ್ರಮಕ್ಕೆ ಚಿತ್ರರಂಗದ ಕಲಾವಿದರೇ ಇಲ್ಲ ಎಂದರೆ ಹೇಗೆ? ಎಂದು ಕಿಡಿಕಾರಿದ್ದರು. ಡಿಸಿಎಂ ಮಾತಿನ ಬಗ್ಗೆ ಭಾರಿ ಚರ್ಚೆಯಾಗುತ್ತಿದೆ. ಈ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆಗೆ ನಟ ಜಗ್ಗೇಶ್ ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ಯಕ್ರಮ 7ಘಂಟೆಗೆ ಆಹ್ವಾನ ಪತ್ರಿಕೆ ತಲುಪಿದ್ದು 6ಘಂಟೆಗೆ… ಜೊತೆಗೆ ಒಗಟ್ಟಿಲ್ಲಾ, ಸಂವಾದವಿಲ್ಲಾ… ಒಟ್ಟಾರೆ ಕಲಾವಿದರ ಸಂಘವೆ ಕಣ್ಮರೆ… ಕನ್ನಡ ಚಿತ್ರರಂಗ ಅವಸಾನ ಕರ್ನಾಟಕದಲ್ಲಿ…ಯಾವ ಕಲಾವಿದರು ಏನಾಗಿದ್ದಾರೆ ಕಲಾವಿದರಾದ ನಮಗೆ ಮಾಹಿತಿಯಿಲ್ಲಾ! ಸಾವಿನ ಅಂಚಿನ ಚಿತ್ರರಂಗಕ್ಕೆ ಬೋಲ್ಟೆ ಇಲ್ಲಾ ಇನ್ನು ಟೈಟ್ ಮಾಡಿ ಏನು ಪ್ರಯೋಜನ? ಎಂದು ಪ್ರಶ್ನಿಸಿದ್ದಾರೆ.
ಒಂದು ಕಮಿಟಿಮಾಡಿ ಅದರಲ್ಲಿ ಹಿರಿಯ ನಟರು, ನಿರ್ಮಾಪಕರು, ನಿರ್ದೇಶಕರು, ಪತ್ರಕರ್ತರು ಇರುವಂತೆ ರಚಿಸಿ ಈಗಿನ ಚಿತ್ರರಂಗದ ವಾಸ್ತವ ಅರಿತು ಕನ್ನಡ ಚಿತ್ರರಂಗ ಉಳಿಯುವಂತೆ ಬೆಳೆಯುವಂತೆ ಒಗ್ಗಟ್ಟಿನಿಂದ ಒಟ್ಟುಗೂಡುವಂತೆ ಚಿಂತನೆಯ ಚಾವಡಿ ರಚನೆಯಾಗಲಿ! ನಿಮಗೆ ದಿನ ಸಿಗುವ ಕೆಲವರು ಮಾತ್ರ ಚಿತ್ರರಂಗವಲ್ಲಾ ಅನೇಕರಿದ್ದಾರೆ ಡಿ.ಕೆ.ಶಿವಕುಮಾರ್ ಅವರೇ ಎಂದಿದ್ದಾರೆ.
ಕಲಾವಿದರು ಒಟ್ಟುಗೂಡಲೆಂದೆ ಡಾ:ರಾಜಕುಮಾರ್ ರವರು ಕಲಾವಿದರ ಸಂಘ ಮಾಡಿದ್ದರು. ದೌರ್ಭಾಗ್ಯ ಅದು ಇಂದು ನಿಷ್ಕ್ರಿಯಗೊಂಡಿದೆ. ಕೂಡಲೆ ನಿಮ್ಮ ಅಧಿಕಾರಿಗಳಿಗೆ ಸೂಚಿಸಿ ಎಲೆಕ್ಷನ್ ಮಾಡಿಸಿ ಕಲಾವಿದರು ಒಂದೆಡೆ ಕೂರುವಂತೆ ಮಾಡಿ…ಒಗ್ಗಟ್ಟು ಇರುವ ಮನೆ ಹಾಳಾದ ನಿದರ್ಶನವಿಲ್ಲ. ಚಿತ್ರರಂಗದ ಸಮಸ್ಯೆ ಅನೇಕ. ನಿಮ್ಮ ಗಮನಕ್ಕಾಗಿ ತಂದಿರುವೆ ಎಂದು ತಿಳಿಸಿದ್ದಾರೆ.