ಟಿಕೆಟ್ ಇಲ್ಲದೆ ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ ಪೊಲೀಸ್ ಅಧಿಕಾರಿಯೊಬ್ಬರಿಗೆ ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್ (ಟಿಟಿಇ) ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ರೆಡ್ಡಿಟ್‌ನ r/IndianRailways ಸಮುದಾಯದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ, “ಎಸಿ ಕೋಚ್‌ನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಟಿಟಿಇ ಪ್ರಶ್ನಿಸಿದರು” ಎಂದು ಶೀರ್ಷಿಕೆ ನೀಡಲಾಗಿದೆ.
ವಿಡಿಯೋದಲ್ಲಿ, ಟಿಟಿಇ, ಪೊಲೀಸ್ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. “ಯೂನಿಫಾರ್ಮ್‌ನಲ್ಲಿರುವವರಿಗೆ ರೈಲ್ವೆ ಪ್ರಯಾಣ ಉಚಿತವೇ ? ಟಿಟಿಇ ಪೊಲೀಸ್ ಅಧಿಕಾರಿಗೆ ಟಿಕೆಟ್ ಕೇಳಬಾರದೇ ? ನಿಮ್ಮ ಬಳಿ ಸಾಮಾನ್ಯ ಟಿಕೆಟ್ ಕೂಡ ಇಲ್ಲ, ಆದರೂ ನೀವು ಎಸಿ ಕೋಚ್‌ನಲ್ಲಿ ಕುಳಿತಿದ್ದೀರಿ. ಇದು ನಿಮ್ಮ ಮನೆಯೆಂದು ತಿಳಿದುಕೊಂಡಿದ್ದೀರಾ ?” ಎಂದು ಟಿಟಿಇ ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ತಮ್ಮ ಹಾಸ್ಯದ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. “ವಿಮಾನ ನಿಲ್ದಾಣಗಳಂತೆ ರೈಲ್ವೆಗೆ ಒಂದು ವ್ಯವಸ್ಥೆ ಬೇಕು, ಮಾನ್ಯವಾದ ಕಾಯ್ದಿರಿಸಿದ ಟಿಕೆಟ್ ಹೊಂದಿರುವ ಪ್ರಯಾಣಿಕರಿಗೆ ಮಾತ್ರ ಅನುಮತಿ ನೀಡಬೇಕು” ಎಂದು ಬಳಕೆದಾರರೊಬ್ಬರು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು, “ನಾನು ಒಮ್ಮೆ ಸಬರಮತಿಯಿಂದ ಜೈಪುರಕ್ಕೆ 3ಎಸಿಯಲ್ಲಿ ಪ್ರಯಾಣಿಸಿದೆ, ಇಬ್ಬರು ಪೊಲೀಸ್ ಸಿಬ್ಬಂದಿ ನಮ್ಮ ಕೋಚ್ ಗೆ ಬಂದರು. ನಾವು ತಿಂಡಿಗಾಗಿ ಫುಲೇರಾ ಜಂಕ್ಷನ್‌ನಲ್ಲಿ ಇಳಿದಾಗ, ಅವರು ನಮ್ಮ ಹಿಂದೆಯೇ ಬಾಗಿಲು ಮುಚ್ಚಿದರು. ಮರುಪ್ರವೇಶಿಸಲು ನಾವು ಇನ್ನೊಂದು ಕೋಚ್‌ಗೆ ಓಡಬೇಕಾಯಿತು” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಭಾರತೀಯ ರೈಲ್ವೆಯಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುವುದು 250 ರೂ.ನಿಂದ ಪ್ರಾರಂಭವಾಗುವ ಭಾರಿ ದಂಡಕ್ಕೆ ಕಾರಣವಾಗಬಹುದು ಎಂದು ರೈಲ್ವೆ ಇಲಾಖೆ ಹೇಳಿದೆ. ಟಿಕೆಟ್ ಜೊತೆಗೆ ಮಾನ್ಯವಾದ ಭಾರತೀಯ ಗುರುತಿನ ಚೀಟಿ ಅಥವಾ ಇ-ಟಿಕೆಟ್ ಅನ್ನು ನೀಡಲು ಪ್ರಯಾಣಿಕರು ವಿಫಲವಾದರೆ, ಟಿಕೆಟ್ ಪರೀಕ್ಷಕರು ಅವರನ್ನು ಟಿಕೆಟ್ ರಹಿತರೆಂದು ಪರಿಗಣಿಸಲು ಅಧಿಕಾರ ಹೊಂದಿದ್ದಾರೆ.
View this post on Instagram