
ಬಳ್ಳಾರಿ: ಜಿಲ್ಲೆಯ ವಿವಿಧ ತಾಲ್ಲೂಕುಗಳ ನ್ಯಾಯಬೆಲೆ ಅಂಗಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದಾಗ ಹೆಚ್ಚುವರಿಯಾಗಿ ಪಡಿತರ ದಾಸ್ತಾನು ಕಂಡುಬಂದ ಒಟ್ಟು 10 ನ್ಯಾಯಬೆಲೆ ಅಂಗಡಿಗಳ ಪರವಾನಿಗೆ ರದ್ದು ಮಾಡಲಾಗಿದ್ದು, ಒಂದು ಗೋದಾಮಿನ ವ್ಯವಸ್ಥಾಪಕರನ್ನು ಅಮಾನತುಗೊಳಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧ್ಯಕ್ಷ ಡಾ.ಹೆಚ್.ಕೃಷ್ಣ ಹೇಳಿದ್ದಾರೆ.
ಶುಕ್ರವಾರ ನಗರದ ಸರ್ಕಾರಿ ಅತಿಥಿ ಗೃಹದ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ಕಳೆದ ಐದು ದಿನಗಳಿಂದ ಜಿಲ್ಲಾದ್ಯಂತ ಆಯೋಗದ ಸದಸ್ಯರು ಒಳಗೊಂಡಂತೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಆಹಾರ ನಾಗರಿಕ ಸರಬರಾಜು ನಿಗಮದ ಸಗಟು ಗೋದಾಮುಗಳಿಗೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಲಾಗಿದ್ದು, ಅಲ್ಲಿ ಸ್ವಚ್ಛತೆ ಕಾಯ್ದುಕೊಳ್ಳದೇ ಇರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ತಾಲ್ಲೂಕುಗಳ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿದಾಗ ಅಲ್ಲಿ ಯಾವುದೇ ರೀತಿಯ ಆಹಾರ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಮಾಹಿತಿ ವಿವರ ಫಲಕ ಪ್ರದರ್ಶಿಸುವುದು ಕಂಡುಬಂದಿಲ್ಲ. ಗ್ರಾಹಕರಿಗೆ ನ್ಯೂನತೆ ಕಂಡುಬಂದಲ್ಲಿ ಅವರು ಯಾರನ್ನು ವಿಚಾರಿಸಬೇಕು ಎಂಬುದರ ಕುರಿತ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಹೆಸರು ಮತ್ತು ಸಂಪರ್ಕ ವಿವರ ಸಹಿತ ಮಾಹಿತಿ ಪ್ರದರ್ಶಿಸಬೇಕು ಎಂದು ಸೂಚಿಸಲಾಗಿದೆ ಎಂದರು.
ನ್ಯಾಯ ಬೆಲೆ ಅಂಗಡಿಗಳಲ್ಲಿಯೂ ಸಹ ಸ್ವಚ್ಚತಾ ಮರೀಚಿಕೆ ಆಗಿದೆ. ಜಾಗೃತಿ ಸಮಿತಿ ಸದಸ್ಯರ ಪಟ್ಟಿ ಹಾಗೂ ಆಹಾರ ಆಯೋಗದ ಸದಸ್ಯರ ನಾಮಫಲಕ ಅಳವಡಿಸಿಲ್ಲ. ಜಾಗೃತಿ ಸಮಿತಿ ಕೊರತೆ, ಭೌತಿಕ ಹಾಗೂ ತಾಂತ್ರಿಕ ದಾಸ್ತಾನು ವ್ಯತ್ಯಾಸ ಕಂಡುಬಂದಿದೆ. ಅದಕ್ಕಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಮಂಗಳವಾರ ಹಾಗೂ ಸರ್ಕಾರಿ ರಜೆ ಹೊರತು ಪಡಿಸಿ, ನ್ಯಾಯ ಬೆಲೆ ಅಂಗಡಿ ತೆರೆದಿರಬೇಕು. ಪಡಿತರ ವಿತರಣೆ ಕಾರ್ಯ, ಪಡಿತರ ವಿತರಣೆ ಸಮರ್ಪಕವಾಗಿ ವಿತರಿಸಿರುವ ಬಗ್ಗೆ ಫಲಾನುಭವಿಗಳ ಮನೆ-ಮನೆ ಭೇಟಿ ನೀಡಿ ಖುದ್ದು ಪರಿಶೀಲನೆ ಮಾಡಲಾಗಿದೆ ಎಂದರು.
ಪಡಿತರ ಅಕ್ಕಿ ಸಂಗ್ರಹಿಸುವ ಉಗ್ರಾಣಗಳಲ್ಲಿಯೂ ಸಹ ಸರಿಯಾದ ವ್ಯವಸ್ಥೆಯಿಲ್ಲ. ಮಾನದಂಡ ಇಲ್ಲದೆ ಪರವಾನಗಿ ನೀಡಲಾಗಿದೆ. ತಿಂಗಳಲ್ಲೇ ನಾಲ್ಕು ದಿನ ಮಾತ್ರ ಪಡಿತರ ವಿತರಿಸುವುದು. ಮುಂಚಿತವಾಗಿ ಬೆರಳು ಗುರುತು ಹಾಕಿಸಿಕೊಳ್ಳುವುದು ಗಮನಕ್ಕೆ ಬಂದಿದೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ವಿವಿಧ ವಸತಿ ಶಾಲೆಯಲ್ಲಿ ಮೂಲಭೂತ ಸೌಕರ್ಯಗಳು ಇಲ್ಲ. ಗುಣಮಟ್ಟದ ಆಹಾರ ನೀಡುತ್ತಿಲ್ಲ. ಈ ಕುರಿತು ನಿಲಯ ಪಾಲಕರ ಅಮಾನತಿಗೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯರಾದ ಲಿಂಗರಾಜ್ ಕೋಟೆ, ರೋಹಿಣಿ ಪ್ರಿಯ, ಮಾರುತಿ ಎಂ.ದೊಡ್ಡಲಿಂಗಣ್ಣನವರ್, ಸುಮಂತ್ ರಾವ್ ಸೇರಿದಂತೆ ಇತರರಿದ್ದರು.