ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ನೂಡಲ್ಸ್ ವಿಚಾರದಲ್ಲಿ ನಡೆದ ಮಾರಾಮಾರಿ ಯಲ್ಲಿ 14 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ್ದಾನೆ. ಶಾಂತನು ದಾಸ್ ಎಂಬ ಬಾಲಕನೇ ಮೃತಪಟ್ಟ ದುರ್ದೈವಿ.
ಸುಖದೇವ್ ಎಂಬುವವರು ತಮ್ಮ ಮಗನೊಂದಿಗೆ ಅನಿಲ್ ಕುಮಾರ್ ಮಲ್ಲಿಕ್ ಅವರ ಅಂಗಡಿಗೆ ನೂಡಲ್ಸ್ ತಿನ್ನಲು ಹೋಗಿದ್ದರು. ಆದರೆ ಅರ್ಧ ಗಂಟೆ ಕಳೆದರೂ ಅವರಿಗೆ ನೂಡಲ್ಸ್ ಸಿಗಲಿಲ್ಲ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸುಖದೇವ್ ಅವರನ್ನು ಮಲ್ಲಿಕ್ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಂದೆಯನ್ನು ಹೊಡೆಯುತ್ತಿರುವುದನ್ನು ನೋಡಿದ ಶಾಂತನು ಮಲ್ಲಿಕ್‌ನನ್ನು ಪ್ರಶ್ನಿಸಿದ್ದಾನೆ. ಆಗ ಸ್ಥಳದಲ್ಲಿದ್ದ ಕಮಲ್ ಮಲ್ಲಿಕ್ ಮತ್ತು ಇತರರು ಶಾಂತನು ಮೇಲೆ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಗಂಭೀರವಾಗಿ ಗಾಯಗೊಂಡ ಶಾಂತನು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಕಮಲ್ ಮಲ್ಲಿಕ್‌ನನ್ನು ಪೋಲಿಸರು ಬಂಧಿಸಿದ್ದಾರೆ. ಇತರ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಈ ಘಟನೆಯು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.