
ಚಿಕ್ಕಮಗಳೂರು: ಲಾರಿ ಅಡ್ಡ ಹಾಕಿ ಚಾಲಕನ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಶೃಂಗೇರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಸುದೀಪ್ ಅವರನ್ನು ಬಾಳೆಹೊನ್ನೂರು ಠಾಣೆ ಪೊಲೀಸರು ಸೋಮವಾರ ರಾತ್ರಿ ಬಂಧಿಸಿದ್ದು, ನಂತರ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.
ಸೋಮವಾರ ಸಂಜೆ ಚಿಕ್ಕಮಗಳೂರಿನಿಂದ ಕಾಫಿ ಬೀಜದ ಚೀಲಗಳನ್ನು ತುಂಬಿಕೊಂಡು ಭದ್ರಾ ಎಸ್ಟೇಟ್ ಗೆ ಹೋಗುತ್ತಿದ್ದ ಲಾರಿಯನ್ನು ಎಲೆಕಲ್ಲು ಸಮೀಪ ಸುದೀಪ್ ತಡೆದಿದ್ದಾರೆ. ಲಾರಿ ಅಡ್ಡ ಹಾಕಿದ ಅವರು ಚಾಲಕ ಆತೀಫ್ ಮೇಲೆ ಹಲ್ಲೆ ಮಾಡಿದ್ದಾರೆ. ಮದ್ಯ ಸೇವಿಸಿದ್ದ ಸುದೀಪ್ 50 ಸಾವಿರ ಹಣ ಕೇಳಿದ್ದಾರೆ ಎಂದು ಚಾಲಕ ಆರೋಪಿಸಿದ್ದಾನೆ.
ಈ ವೇಳೆ ಆತೀಫ್ ಮತ್ತು ಸುದೀಪ್ ನಡುವೆ ಗಲಾಟೆಯಾಗಿದೆ. ಹೇರೂರು ಗ್ರಾಪಂ ಸದಸ್ಯ ಅಮ್ಜದ್ ವಿಚಾರಿಸಲು ಹೋದಾಗ ಅವರ ಮೇಲೆಯೂ ಸುದೀಪ್ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ. ಬಾಳೆಹೊನ್ನೂರು ಠಾಣೆ ಪೋಲಿಸರಿಗೆ ಆತೀಫ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸುದೀಪ್ ಅವರನ್ನು ಬಂಧಿಸಿ ನಂತರ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಿದ್ದಾರೆ.