
ಬೆಳಗಾವಿ: ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಬಾವನ ಸೌಂದತ್ತಿ ಗ್ರಾಮದ ದಿಗ್ಗಜವಾಡಿ ರಸ್ತೆ ಸಮೀಪ ಬೀದಿ ನಾಯಿಗಳ ದಾಳಿಗೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.
ಕಟ್ಟಡ ಕಾರ್ಮಿಕ ಶಿವಾನಂದ ಕುಂಬಾರ(35) ಮೃತಪಟ್ಟವರು. ಶನಿವಾರ ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಅವರ ಮೇಲೆ ನಾಲ್ಕೈದು ಬೀದಿ ನಾಯಿಗಳು ದಾಳಿ ಮಾಡಿ ತೀವ್ರವಾಗಿ ಕಚ್ಚಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಚಿಕ್ಕೋಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಾಯಬಾಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.