![](https://kannadadunia.com/wp-content/uploads/2025/02/Untitled-85.png)
ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣದ ವೇಳೆ ಸ್ವಲ್ಪ ಯಾಮಾರಿದ್ದರೂ ಪೊಲೀಸರ ಹೆಣಗಳು ಬೀಳುತ್ತಿದ್ದವು ಎಂದು ಉದಯಗಿರಿ ಠಾಣೆಯಲ್ಲಿ ದಾಖಲಾದ ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದೆ.
ಅಕ್ರಮವಾಗಿ ಗುಂಪು ಕಟ್ಟಿಕೊಂಡು ಸರ್ಕಾರದ ಆಸ್ತಿ ಪಾಸ್ತಿಗೆ ಹಾನಿ ಮಾಡಲಾಗಿದೆ. ಕಲ್ಲು ತೂರಾಟ ನಡೆಸಿದ 1000ಕ್ಕೂ ಅಧಿಕ ಮಂದಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ, ಗಲಭೆಯಲ್ಲಿ ಇದ್ದವರು ಒಂದು ಸಾವಿರಕ್ಕೂ ಹೆಚ್ಚು ಜನ ಎಂದು ಪೊಲೀಸರು ತಿಳಿಸಿದ್ದಾರೆ.
ವಿವಾದಿತ ಪೋಸ್ಟ್ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಫೆಬ್ರವರಿ 9ರಂದು ಕಲ್ಯಾಣಗಿರಿಯ ಸತೀಶ್ ನನ್ನು ಉದಯಗಿರಿ ಪೊಲೀಸ್ ಠಾಣೆಗೆ ಕರೆತರಲಾಗಿತ್ತು. ರಾತ್ರಿ 8.30ರ ಸುಮಾರಿಗೆ ಠಾಣೆಯ ಬಳಿ ಜಮಾಯಿಸಿದ್ದ ಮುಸ್ಲಿಂ ಯುವಕರು ಆರೋಪಿಯನ್ನು ನಮ್ಮ ವಶಕ್ಕೆ ಕೊಡಿ ಎಂದು ಪಟ್ಟು ಹಿಡಿದಿದ್ದರು. ನಮ್ಮ ಧರ್ಮದ ಬಗ್ಗೆ ಮಾತನಾಡಿದ್ದಾನೆ ಎಂದು ಕೂಗಾಟ ನಡೆಸಿದ್ದರು.
ರಾತ್ರಿ 9:15ಕ್ಕೆ 1000ಕ್ಕೂ ಅಧಿಕ ಮುಸ್ಲಿಂ ಯುವಕರ ಗುಂಪು ಜಮಾವಣೆಯಾಗಿತ್ತು. ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಕೂಗಾಟ ನಡೆಸುತ್ತಿತ್ತು. ಉದಯಗಿರಿ ಠಾಣೆ ಮತ್ತು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲುತೂರಾಟದಿಂದ ಪೊಲೀಸ್ ಠಾಣೆಯ ಕಿಟಕಿ ಗಾಜು ಪುಡಿಪುಡಿಯಾಗಿವೆ. ಬಂದೋಬಸ್ತ್ ನಲ್ಲಿದ್ದ ಪೊಲೀಸರ ಮೇಲೆಯೂ ಕಲ್ಲು ತೂರಾಟ ನಡೆಸಲಾಗಿದೆ. ರಸ್ತೆಯ ಮೇಲೆ ವಾಹನ ಸಂಚಾರ ಆಗದಂತೆ ಬೆಂಕಿ ಹಚ್ಚಿ ಪುಂಡಾಟಿಕೆ ಮಾಡಲಾಗಿದೆ. ಕಲ್ಲು ತೋರಾಟದ ವೇಳೆ ಪೊಲೀಸರು ಮತ್ತು ಸಾರ್ವಜನಿಕರು ಗಾಯಗೊಂಡಿದ್ದಾರೆ. ಡಿಸಿಪಿ ಸೇರಿ ಹಲವು ಪೋಲಿಸ್ ಅಧಿಕಾರಿಗಳ ವಾಹನಗಳ ಮೇಲೆ ಕಲ್ಲು ಎಸೆಯಲಾಗಿದೆ. ಹೆಚ್ಚಿನ ಸಿಬ್ಬಂದಿಯನ್ನು ಕರೆಸಿ ಗುಂಪು ಚದುರಿಸಲಾಗಿದೆ. ಅಧಿಕಾರಿಗಳ ಮೇಲೆ ಹಲ್ಲೆ, ನಿಂದನೆ, ಆಸ್ತಿ ಹಾನಿ ವಾಹನಗಳು ಜಖಂ ಆಗಿವೆ. ಈ ಸಂಬಂಧ ಉದಯಗಿರಿ ಠಾಣೆ ಪಿಎಸ್ಐ ಸುನಿಲ್ ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದೆ. 13 ಜನರಿಗೆ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಆರೋಪಿಗಳನ್ನು ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. 12 ಜನ ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಓರ್ವ ಬಾಲಕನನ್ನು ಬಾಲ ಮಂದಿರಕ್ಕೆ ಪೊಲೀಸರು ಕಳುಹಿಸಿದ್ದಾರೆ.