![](https://kannadadunia.com/wp-content/uploads/2022/05/yatnal-file-photo-110700.jpg)
ನವದೆಹಲಿ: ರಾಜ್ಯ ಬಿಜೆಪಿಯಲ್ಲಿನ ಬಣ ಬಡಿದಾಟ ದೆಹಲಿ ಅಂಗಳ ತಲುಪಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ಹಾಗೂ ಶಾಸಕ ಯತ್ನಾಳ್ ಬಣ ಇಂದು ದೆಹಲಿಯಲ್ಲಿ ಬೀಡುಬಿಟ್ಟಿವೆ. ಕೇಂದ್ರ ಸಚಿವ ವಿ.ಸೋಮಣ್ಣ ಅವರ ಮನೆಯಲ್ಲಿ ಪೂಜೆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದು, ಸೋಮಣ್ಣ ನಿವಾಸದಲ್ಲಿಯೇ ಬಿಜೆಪಿ ಆಂತರಿಕ ಕಲಹಕ್ಕೆ ತೆರೆ ಬೀಳುವ ಸಾಧ್ಯತೆ ದಟ್ಟವಾಗಿದೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಯತ್ನಾಳ್, ಮೊನ್ನೆ ನಾವು ದೆಹಲಿಗೆ ಬಂದಿದ್ದು, ಪೌಂಡೇಷನ್ ಹಾಕಲು. ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಾಸ್ ಹೋಗಿದ್ದೇವೆ. ಇಂದು ನಾವು ಹೈಕಮಾಂಡ್ ಭೇಟಿಗೆ ಯಾವುದೇ ಸಮಯ ಕೇಳಿಲ್ಲ. ಸೋಮಣ್ಣ ಅವರ ಮನೆಯ ಪೂಜೆಗೆ ಬಂದಿದ್ದೇವೆ. ಸಾಧ್ಯವದರೆ ಸೋಮಣ್ನ ಅವರ ಮನೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಬಿಜೆಪಿ ಹೈಕಮಾಂಡ್ ನಮ್ಮ ಅಂತಿಮ ಬಾಸ್. ಹೈಕಮಾಂಡ್ ಇರುಳು ಕಂಡ ಬಾವಿಗೆ ಹಗಲು ಬೀಳಲು ಹೇಳಿದರೂ ಬೀಳುತ್ತೇವೆ. ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯ ವ್ಯಕ್ತಿಯ ಆಯ್ಕೆಯಾಗಬೇಕಿದೆ. ನೋಡೋಣ ಇಂದು ಎಲ್ಲ ಗೊಂದಲಗಳೂ ಅಂತ್ಯವಾದರೂ ಆಗಬಹುದು ಎಂದು ಹೇಳಿದರು.