ರಾಮನಗರ: ದೇಶ, ಧರ್ಮ ಯಾವುದೇ ಆಗಿರಲಿ ಮಾನವೀಯತೆ ಮುಖ್ಯ. ಸರಪಳಿ ಕಟ್ಟಿ ನಡೆಸಿಕೊಳ್ಳುವುದು ಸರಿಯಲ್ಲ. ಇದು ಖಂಡನೀಯ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ರಾಮನಗರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಅಕ್ರಮವಾಗಿ ನೆಲೆಸಿದ್ದಾರೆ ಎಂದು ಕೆಲವು ಭಾರತೀಯರನ್ನು ಅಮೆರಿಕ ಸರ್ಕಾರ ಕೈ ಕಾಲಿಗೆ ಕಬ್ಬಿಣದ ಸರಪಳಿ ಕಟ್ಟಿ ಭಾರತಕ್ಕೆ ವಾಪಸ್ ಕಳಿಸಿರುವ ರೀತಿ ಸರಿಯಲ್ಲ. ಈ ಹಿಂದೆ ಕೂಲಿ ಕಾರ್ಮಿಕರಿಗೆ ಸರಪಳಿ ಹಾಕಿ ಕಟ್ಟುತ್ತಿದ್ದದ್ದನ್ನು ನಾವು ನೋಡಿದ್ದೇವೆ. ಅದನ್ನು ತಪ್ಪಿಸಲು ಸರ್ಕಾರ ಕಾನೂನು ತಂದು ಶಿಕ್ಷೆ ನೀಡಿದೆ. ಆದರೆ ಮುಂದುವರಿದ, ಜಾಗೃತಿ ಇರುವ ದೇಶಗಳಲ್ಲಿ ಈ ರೀತಿ ನಡೆದಿರುವುದು ಖಂಡನೀಯ ಎಂದರು.
ಅಕ್ರಮವಾಗಿ ಅವರ ದೇಶದಲ್ಲಿ ನೆಲೆಸಿದ್ದರೆ, ಅದಕ್ಕೆ ಯಾವ ಶಿಕ್ಷೆ ನೀಡಬೇಕೋ ನೀಡಲಿ. ಅದನ್ನು ಬಿಟ್ಟು, ಈ ರೀತಿ ಖೈದಿಗಳಿಗೆ ಹಾಕಿದಂತೆ ಸರಪಳಿ ಹಾಕಿರುವುದನ್ನು ಯಾರಿಂದಲೂ ಒಪ್ಪಲು ಸಾಧ್ಯವಿಲ್ಲ. ಇದು ಮಾನವ ಕುಲಕ್ಕೆ ಅಗೌರವ ಎಂದು ಗುಡುಗಿದರು.