ಬೆಂಗಳೂರಿನಲ್ಲಿ ಹೊಸ ರೀತಿಯ ವಂಚನೆ ಬೆಳಕಿಗೆ ಬಂದಿದೆ. ಡೆಲಿವರಿ ಮಾಡುವ ವ್ಯಕ್ತಿಯಂತೆ ಕರೆ ಮಾಡಿ, ಯಾವುದೇ ಆರ್ಡರ್ ಮಾಡದಿದ್ದರೂ ನಿಮ್ಮ ಮನೆಗೆ ಡೆಲಿವರಿ ತಲುಪಿಸುವುದಾಗಿ ಹೇಳುತ್ತಾರೆ. ಈ ಹೊಸ ವಂಚನೆ ಜಾಲವು ಬೆಂಗಳೂರಿನಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಈ ವಂಚನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ವಿವರ ಇಲ್ಲಿದೆ.
ಇದೇ ರೀತಿಯ ಘಟನೆಯನ್ನು ವಿವರಿಸಿರುವ ಬಳಕೆದಾರರೊಬ್ಬರು ರೆಡ್ಡಿಟ್ನಲ್ಲಿ ಪೋಸ್ಟ್ ಮಾಡಿದ್ದಾರೆ.
“ನನ್ನ ಗೆಳತಿಗೆ ಇಂದು ಮಧ್ಯಾಹ್ನ ಒಂದು ಕರೆ ಬಂದಿತ್ತು. ಒಂದು ಪಾರ್ಸೆಲ್ ಇದೆ ಎಂದು ಆತ ಹೇಳಿ ಬಾಗಿಲು ತೆರೆಯುವಂತೆ ಕೇಳಿದ್ದ” ಎಂದು ಬರೆದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಳಕೆದಾರರೊಬ್ಬರು, “ಇದು ಸಾಮಾನ್ಯ ವಂಚನೆ ವಿಧಾನ, ಚಿಂತಿಸಬೇಡಿ. ನಾನು ಇಂತಹ ಅನೇಕ ವಂಚನೆ ಕಥೆಗಳನ್ನು ಓದಿದ್ದೇನೆ. ಪಾರ್ಸೆಲ್ ಸಿಒಡಿ (ಕ್ಯಾಶ್ ಆನ್ ಡೆಲಿವರಿ) ಆಗಿರುತ್ತದೆ. ನಿಮ್ಮ ಗೆಳತಿ ಹಣ ಪಾವತಿಸಿರಬಹುದು ಮತ್ತು ಪಾರ್ಸೆಲ್ನಲ್ಲಿ ಕಳಪೆ ಆಹಾರ ಪದಾರ್ಥಗಳು ಅಥವಾ ಖಾಲಿ ಪೆಟ್ಟಿಗೆ ಇರುತ್ತದೆ” ಎಂದು ಬರೆದಿದ್ದಾರೆ.
ಮತ್ತೊಬ್ಬರು ಈ ವಂಚನೆಯ ಬಗ್ಗೆ ಪೋಸ್ಟ್ನಲ್ಲಿ ಬರೆದಿದ್ದು “ಗೇಟೆಡ್ ಸೊಸೈಟಿ ಎಂದರೆ ಭದ್ರತೆ ಸಂಪೂರ್ಣವಾಗಿ ಬಲವಾಗಿದೆ ಎಂದು ಅರ್ಥವಲ್ಲ. ಭದ್ರತೆಯಲ್ಲಿ ಲೋಪವಿರಬಹುದು. ಈ ವ್ಯಕ್ತಿ ನಿಮ್ಮ ಗೆಳತಿಯನ್ನು ಹಿಂಬಾಲಿಸುತ್ತಿರಬಹುದು. ಈತ ಹಿಂದೆ ನಿಮ್ಮ ಮನೆಗೆ ಡೆಲಿವರಿ ಮಾಡಿರಬಹುದು. ಆ್ಯಪ್ನಲ್ಲಿ ದೃಢೀಕರಣದ ನಂತರ, ನಿಮ್ಮ ಸಂಖ್ಯೆಯನ್ನು ಬಳಸಿ ಆಕೆಯನ್ನು ಹಿಂಬಾಲಿಸಿರಬಹುದು. ನೀವು ಈ ಸಂಖ್ಯೆಯನ್ನು ಭದ್ರತೆಯೊಂದಿಗೆ ಪರಿಶೀಲಿಸುವಂತೆ ಮತ್ತು ಈತ ಹಿಂದೆ ನಿಮ್ಮ ಮನೆಗೆ ಡೆಲಿವರಿ ಮಾಡಿದ್ದಾನೆಯೇ ಎಂದು ಪರಿಶೀಲಿಸುವಂತೆ ನಾನು ಸೂಚಿಸುತ್ತೇನೆ. ನಂತರ ನೀವು ಪೊಲೀಸ್ ಮತ್ತು ಸೇವಾ ಪೂರೈಕೆದಾರರಿಗೆ ದೂರು ಸಲ್ಲಿಸಬಹುದು” ಎಂದು ಬರೆದಿದ್ದಾರೆ.
ಈ ವಂಚನೆ ಏಕೆ ಅಪಾಯಕಾರಿ ?
ಅಪರಿಚಿತ ಸಂಖ್ಯೆಗಳಿಂದ ಸ್ವೀಕರಿಸಿದ ಯಾವುದೇ ಕರೆಗಳು ಅಥವಾ ಸಂದೇಶಗಳನ್ನು ಪರಿಶೀಲಿಸುವುದು ಬಹಳ ಮುಖ್ಯ. ವಿಶೇಷವಾಗಿ ಡೆಲಿವರಿಗಳಿಗೆ ಸಂಬಂಧಿಸಿದ ಅಧಿಸೂಚನೆಗಳನ್ನು ಸ್ವೀಕರಿಸುವಾಗ, ಆಯಾ ಸೇವಾ ಪೂರೈಕೆದಾರರೊಂದಿಗೆ ಖಚಿತಪಡಿಸಿಕೊಳ್ಳುವುದು ಸೂಕ್ತ. ಹೆಚ್ಚುವರಿಯಾಗಿ, ಮನೆಯಲ್ಲಿ ಸಿಸಿಟಿವಿ ಅಥವಾ ಡೋರ್ಬೆಲ್ ಕ್ಯಾಮೆರಾಗಳನ್ನು ಸ್ಥಾಪಿಸುವುದು ಭದ್ರತೆಯನ್ನು ಹೆಚ್ಚಿಸುತ್ತದೆ. ಇಂತಹ ವಂಚನೆ ಚಟುವಟಿಕೆಗಳನ್ನು ತಡೆಯಲು, ನಮ್ಮ ಅರಿವು ಮತ್ತು ಭದ್ರತಾ ಕ್ರಮಗಳನ್ನು ಹೆಚ್ಚಿಸುವುದು ಅತ್ಯಗತ್ಯ.