ಉತ್ತರ ಪ್ರದೇಶದ ಹಮೀರ್ಪುರ್ ಜಿಲ್ಲೆಯ ಸಾಹಿ ಗ್ರಾಮದಲ್ಲಿ ಯುವಕನೊಬ್ಬ ಮದುವೆಯಾದ ಕೆಲವೇ ಗಂಟೆಗಳಲ್ಲಿ ವಧು ಹಣ ಮತ್ತು ಆಭರಣಗಳೊಂದಿಗೆ ಪರಾರಿಯಾಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ ತಡವಾಗಿ ದೂರು ನೀಡಿದ್ದಾನೆ. ತನ್ನೊಂದಿಗೆ ವಂಚನೆ ಎಸಗಲಾಗಿದೆ ಎಂದು ಆರೋಪಿಸಿರುವ ವರ ಜಿತೇಶ್ ಶರ್ಮಾ, ಬಲ್ದೇವ್ ಶರ್ಮಾ ಎಂಬಾತ ಮದುವೆ ಮಾಡಿಸುವುದಾಗಿ 1.50 ಲಕ್ಷ ರೂಪಾಯಿ ಪಡೆದಿದ್ದ ಎಂದು ಹೇಳಿದ್ದಾನೆ.
ಬಾಲಕಿಯ ಜನ್ಮ ಪ್ರಮಾಣಪತ್ರ ಲಭ್ಯವಿಲ್ಲದ ಕಾರಣ ನ್ಯಾಯಾಲಯದ ವಿವಾಹಕ್ಕೆ ಅಡ್ಡಿಯುಂಟಾದ ಹಿನ್ನೆಲೆಯಲ್ಲಿ, ತನ್ನ ಕುಟುಂಬದ ಮುಂದೆ ಪೂರ್ಣ ವಿಧಿವಿಧಾನಗಳೊಂದಿಗೆ ತನ್ನ ಗ್ರಾಮದ ದೇವಸ್ಥಾನದಲ್ಲಿ 2024 ರ ಡಿಸೆಂಬರ್ 13 ರಂದು ಬಬಿತಾಳನ್ನು ವಿವಾಹವಾದೆ ಎಂದು ದೂರುದಾರ ತಿಳಿಸಿದ್ದಾನೆ.
ಮದುವೆಯ ನಂತರ ವಧು ತನ್ನ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದಾಳೆ ಎಂದು ಹೇಳಿ ಹರಿಯಾಣದ ಯಮುನಾ ನಗರದಲ್ಲಿರುವ ತನ್ನ ಮನೆಗೆ ಹೋದಳು ಮತ್ತು ಆಭರಣಗಳನ್ನು ತೆಗೆದುಕೊಂಡು ಹೋದಳು ಎಂದು ಶರ್ಮಾ ಆರೋಪಿಸಿದ್ದಾರೆ. ವಧು ಎರಡು ದಿನಗಳ ನಂತರ ಹಿಂತಿರುಗುವುದಾಗಿ ಭರವಸೆ ನೀಡಿದ್ದಳು ಮತ್ತು ನಂತರ ಆಕೆತನ್ನ ಕರೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದಾಳೆ ಎಂದು ಆತ ಹೇಳಿದ್ದಾನೆ.
ಏತನ್ಮಧ್ಯೆ, ಮದುವೆಯನ್ನು ಏರ್ಪಡಿಸಿದ್ದ ಬಲ್ದೇವ್ ಶರ್ಮಾ ಕೂಡ ವಿಷಯವನ್ನು ತಪ್ಪಿಸಲು ಪ್ರಾರಂಭಿಸುವುದರ ಜೊತೆಗೆ ದೂರುದಾರರ ಆಭರಣ ಮತ್ತು ಹಣವನ್ನು ಹಿಂತಿರುಗಿಸಲು ನಿರಾಕರಿಸಿದ ನಂತರ ಶರ್ಮಾ ತಡವಾಗಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹಮೀರ್‌ಪುರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಭಗತ್ ಸಿಂಗ್ ತಿಳಿಸಿದ್ದಾರೆ.