ಪಶ್ಚಿಮ ಬಂಗಾಳದ ಹೌರಾದಲ್ಲಿ ಮಹಿಳೆಯೊಬ್ಬರು ತಮ್ಮ ಪತಿಗೆ 10 ಲಕ್ಷ ರೂಪಾಯಿಗಳಿಗೆ ಕಿಡ್ನಿ ಮಾರುವಂತೆ ಪ್ರೇರೇಪಿಸಿ, ನಂತರ ಹಣದೊಂದಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ತಮ್ಮ 12 ವರ್ಷದ ಮಗಳ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಬಳಸುವುದಾಗಿ ಪತ್ನಿ, ಪತಿಯ ಬಳಿ ಹೇಳಿದ್ದಳು ಎನ್ನಲಾಗಿದೆ.
ಪತಿಯ ದೂರಿನ ಪ್ರಕಾರ, ಆತನ ಪತ್ನಿ ಒಂದು ವರ್ಷದಿಂದ ಕಿಡ್ನಿ ಮಾರುವಂತೆ ಒತ್ತಡ ಹೇರುತ್ತಿದ್ದು, ಕಳಪೆ ಆರ್ಥಿಕ ಪರಿಸ್ಥಿತಿ ಮತ್ತು ಮಗಳಿಗೆ ಉತ್ತಮ ಶಿಕ್ಷಣ ನೀಡುವ ಬಯಕೆಯನ್ನು ಆಕೆ ಮುಂದಿಟ್ಟಿದ್ದಳು. ಕೊನೆಗೆ ಪತಿ ಒಪ್ಪಿಕೊಂಡಿದ್ದು ಕಳೆದ ತಿಂಗಳು ಶಸ್ತ್ರಚಿಕಿತ್ಸೆಯ ನಂತರ, 10 ಲಕ್ಷ ರೂಪಾಯಿಗಳನ್ನು ಮನೆಗೆ ತಂದಿದ್ದರು. ಪತ್ನಿ ವಿಶ್ರಾಂತಿ ಪಡೆಯುವಂತೆ ಪತಿಗೆ ಸೂಚಿಸಿದ್ದಳು.
“ಒಂದು ದಿನ ಆಕೆ ಮನೆಯಿಂದ ಹೊರಟು ಹೋಗಿ ಹಿಂತಿರುಗಲಿಲ್ಲ. ನಂತರ ನಾನು 10 ಲಕ್ಷ ರೂಪಾಯಿ ನಗದು ಬೀರುವಿಂದ ಕಾಣೆಯಾಗಿರುವುದನ್ನು ಕಂಡುಕೊಂಡೆ” ಎಂದು ಪತಿ ಪಿಟಿಐಗೆ ತಿಳಿಸಿದ್ದಾರೆ.
ಸ್ನೇಹಿತರ ಸಹಾಯದಿಂದ, ಕುಟುಂಬವು ಆಕೆಯನ್ನು ಕೋಲ್ಕತ್ತಾದಲ್ಲಿ ಪತ್ತೆ ಮಾಡಿದ್ದು, ಆಕೆ ಒಂದು ವರ್ಷದ ಹಿಂದೆ ಫೇಸ್‌ಬುಕ್‌ನಲ್ಲಿ ಭೇಟಿಯಾದ ವ್ಯಕ್ತಿಯೊಂದಿಗೆ ವಾಸಿಸುತ್ತಿದ್ದಳು. ಪತಿ, ಅತ್ತೆ ಮತ್ತು ಮಗಳು ಆಕೆಯನ್ನು ಎದುರಿಸಿದಾಗ, ಆಕೆ ಅವರೊಂದಿಗೆ ಮಾತನಾಡಲು ನಿರಾಕರಿಸಿದ್ದಾಳೆ.
ಪತಿಯ ದೂರು ಮತ್ತು ಪ್ರೇಮಿ ಮತ್ತು ಪತಿಯ ಕುಟುಂಬದ ನಡುವಿನ ಸಂವಹನದ ವಿಡಿಯೋ ತುಣುಕಿನ ಆಧಾರದ ಮೇಲೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅವರು ಮಹಿಳೆ ಮತ್ತು ಆಕೆಯ ಪ್ರೇಮಿಯನ್ನು ವಿಚಾರಣೆ ನಡೆಸಲು ಯೋಜಿಸಿದ್ದಾರೆ.