ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ಅಂಡರ್-19 ತಂಡಗಳ ನಡುವಿನ ಟೆಸ್ಟ್ ಪಂದ್ಯದಲ್ಲಿ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ವಿಚಿತ್ರವಾದ ರನೌಟ್ ಒಂದು ಸಂಭವಿಸಿದೆ. ಸ್ಟೆಲೆನ್‌ಬೋಶ್ ವಿಶ್ವವಿದ್ಯಾನಿಲಯದಲ್ಲಿ ನಡೆದ ಪಂದ್ಯದ ಮೂರನೇ ದಿನದಂದು ಇಂಗ್ಲೆಂಡ್‌ನ ಬ್ಯಾಟರ್ ಆರ್ಯನ್ ಸಾವಂತ್ ಅನಿರೀಕ್ಷಿತ ರೀತಿಯಲ್ಲಿ ಔಟ್ ಆಗಿದ್ದಾರೆ.
ಕೇವಲ 11 ರನ್‌ಗಳಲ್ಲಿ ಆಡುತ್ತಿದ್ದ ಸಾವಂತ್, ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಜೇಸನ್ ರೌಲ್ಸ್ ಬೌಲ್ ಮಾಡಿದ ಚೆಂಡನ್ನು ಸ್ವೀಪ್ ಮಾಡಲು ಪ್ರಯತ್ನಿಸಿದ್ದು, ಆದರೆ ಚೆಂಡು ಸಮೀಪದಲ್ಲೇ ನಿಂತಿದ್ದ ಫೀಲ್ಡರ್‌ನ ಹೆಲ್ಮೆಟ್‌ಗೆ ಬಡಿದು ವಿಕೆಟ್‌ಗೆ ಬಡಿದಿದೆ. ಈ ಪ್ರಕ್ರಿಯೆಯಲ್ಲಿ ಫೀಲ್ಡರ್‌ಗೆ ಗಾಯವಾಗಿದ್ದು, ಸಾವಂತ್ ಕ್ರೀಸ್‌ನಿಂದ ಹೊರಗಿದ್ದ ಕಾರಣ ರನೌಟ್ ಆದರು.
18 ವರ್ಷದ ದಕ್ಷಿಣ ಆಫ್ರಿಕಾದ ಆಟಗಾರ ಜೋರ್ಚ್ ವ್ಯಾನ್ ಶಲ್ಕ್‌ವಿಕ್ ಶಾರ್ಟ್ ಲೆಗ್‌ನಲ್ಲಿ ನಿಂತಿದ್ದರು. ಸಾವಂತ್ ಹೊಡೆದ ಚೆಂಡು ಅವರ ಹೆಲ್ಮೆಟ್‌ಗೆ ಬಡಿದ ತಕ್ಷಣ ಅವರು ನೆಲಕ್ಕೆ ಬಿದ್ದಿದ್ದು, ಕೂಡಲೇ ಸಹ ಆಟಗಾರರು ಅವರ ನೆರವಿಗೆ ಧಾವಿಸಿದ್ದರು. ಈ ಹಂತದಲ್ಲಿ ಇಂಗ್ಲೆಂಡ್ ತಂಡ 106 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಆದಾಗ್ಯೂ, ನಂತರ ಚೇತರಿಸಿಕೊಂಡು ದಿನದ ಅಂತ್ಯಕ್ಕೆ 275/8 ತಲುಪಿತು. ವಿಕೆಟ್ ಕೀಪರ್-ಬ್ಯಾಟರ್ ಥಾಮಸ್ ರೆವ್ 71 ರನ್‌ಗಳೊಂದಿಗೆ ತಂಡಕ್ಕೆ ಆಸರೆಯಾದರು. ಈ ಮೂಲಕ ಇಂಗ್ಲೆಂಡ್, ದಕ್ಷಿಣ ಆಫ್ರಿಕಾ ತಂಡದ ವಿರುದ್ಧ 255 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದ್ದು, ದಕ್ಷಿಣ ಆಫ್ರಿಕಾ ತಂಡವು ಪಂದ್ಯಕ್ಕೆ ಮರಳಲು ಸಾಕಷ್ಟು ಶ್ರಮಿಸಬೇಕಾಗಿದೆ.
The first and last time you’ll see a run out like this… @collinsadam pic.twitter.com/ZIEFI8s1Te
— Brent W (@brentsw3) January 28, 2025