ಬೆಂಗಳೂರು: ಬೆಳಗಾವಿಯ ನಂತರ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಸಂವಿಧಾನ ಸಮಾವೇಶ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಇದು ಪಕ್ಷದ್ದಲ್ಲ, ಜನರ ಕಾರ್ಯಕ್ರಮವಾಗಿದೆ. ಎಲ್ಲ ವರ್ಗದವರ ಭಾಗವಹಿಸುವಿಕೆಗಾಗಿ ಸರ್ಕಾರವೇ ಕಾರ್ಯಕ್ರಮ ಆಯೋಜಿಸುವಂತೆ ಮನವಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ ಡಿಸಿಎಂ, ಬೆಳಗಾವಿಯಲ್ಲಿ ಯಶಸ್ವಿಯಾದ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್ ಸಮಾವೇಶವನ್ನು ಇಡೀ ವರ್ಷ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲಿಯೂ ನಡೆಸಲು ತೀರ್ಮಾನ ಮಾಡಲಾಗಿದೆ. ಪಕ್ಷದ ಕಾರ್ಯಕ್ರಮವಾಗದೇ ಜನರ ಕಾರ್ಯಕ್ರಮವಾಗಬೇಕು. ಎಲ್ಲಾ ವರ್ಗದವರು ಭಾಗವಹಿಸಬೇಕು. ಹೀಗಾಗಿ ಸರ್ಕಾರದಿಂದ ಕಾರ್ಯಕ್ರಮ ಮಾಡಲು ಮಾನವಿ ಮಾಡಲಾಗುತ್ತಿದೆ. ಪಕ್ಷದಿಂದಲೂ ಇದಕ್ಕೆ ಅಗತ್ಯ ಸಿದ್ಧತೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
224 ಕ್ಷೇತ್ರಗಳಲ್ಲಿ ನಡೆಯುವ ಕಾರ್ಯಕ್ರಮಗಳ ದಿನಾಂಕ ನಿಗದಿ ಮಾಡಿ ವರ್ಷವಿಡಿ ಆಯೋಜಿಸಲಾಗುವುದು. ಸಾಮಾಜಿಕ ನ್ಯಾಯ, ಸಮಾನತೆಗಾಗಿ ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ್ದಾರೆ. ಇದು ಕೇವಲ ಪುಸ್ತಕವಲ್ಲ, ಗಾಳಿ ಎಷ್ಟು ಅನಿವಾರ್ಯವೋ ಸಂವಿಧಾನ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದ್ದಾರೆ.