ಕಾರವಾರ: ಗರ್ಭ ಧರಿಸಿದ್ದ ಹಸು ಕಡಿದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತಿಬ್ಬರು ಆರೋಪಿಗಳ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ನಡುವೆ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಪೊಲೀಸರು ಘೋಷಿಸಿದ್ದಾರೆ.
ಕಾರವಾರದಲ್ಲಿ ಮಾತನಾಡಿದ ಉತ್ತರ ಕನ್ನಡ ಜಿಲ್ಲೆಯ ಎಸ್ ಪಿ ನಾರಾಯಣ, ಇಬ್ಬರು ಗೋಹಂತಕರ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.
ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಇನ್ನಿಬ್ಬರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧಕಾರ್ಯ ನಡೆಸಲಾಗುತ್ತಿದೆ. ವಾಸಿಮ್, ಮುಜಾಮಿಲ್ ಎಂಬ ಇಬ್ಬರು ಆರೋಪಿಗಳ ಬಗ್ಗೆ ಸುಳಿವು ನೀಡಿದವರಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.
ಕೆಲ ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಸಾಲ್ಕೋಡು ಗ್ರಾಮದಲ್ಲಿ ಗರ್ಭ ಧರಿಸಿದ್ದ ಹಸುವಿನ ರುಂಡ ಬೇರ್ಪಡಿಸಿ, ಕಾಲುಗಳನ್ನು ಕತರಿಸಿ ದೇಹದ ಭಾಗವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದರು. ಈ ಘಟನೆ ಬಳಿಕ ಗ್ರಾಮದಲ್ಲಿ ಹಲವು ಹಸುಗಳು ನಾಪತ್ತೆಯಾಗಿರುವ ಪ್ರಕರಣವೂ ಬೆಳಕಿಗೆ ಬಂದಿತ್ತು. ಘಾನೆ ಖಂಡಿಸಿ ಜಿಲ್ಲೆಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಸರ್ಕಾರ ಕೂಡ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳನ್ನು ಶೀಘ್ರ ಪತ್ತೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಸೂಚಿಸಿತ್ತು.