ಹಾವೇರಿ: ರಾಜ್ಯದಲ್ಲಿ ಫೈನಾನ್ಸ್, ಮೈಕ್ರೋ ಫೈನಾನ್ಸ್ ನವರ ಕಿರುಕುಳಕ್ಕೆ ಬೇಸತ್ತು ಜನರು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಈ ನಡುವೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳದ ಬಗ್ಗೆ ದೂರು ನೀಡಲು ಹೋದ ಮಹಿಳೆಯರಿಗೆ ಪೊಲೀಸರೇ ದಂಡ ವಿಧಿಸಿರುವ ಆರೋಪ ಕೇಳಿಬಂದಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಗುಡ್ಡದ ಬೇವಿನಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಮೈಕ್ರೋ ಫೈನಾನ್ಸ್ ನವರ ಕಾಟದ ಬಗ್ಗೆ ದೂರು ನೀಡಲು ಹೋದ ಇಬ್ಬರು ಮಹಿಳೆಯರಿಗೆ ಪೊಲೀಸ್ ಸಿಬ್ಬಂದಿ ಬೆದರಿಸಿ ದಂಡ ವಸೂಲಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲಗೇರಿ ಠಾಣೆ ಪೊಲೀಸರು ಈ ರೀತಿ ವರ್ತಿಸುತ್ತಿದ್ದು, ಫೈನನಸ್ ನವರ ಕಿರುಕುಳಕ್ಕೆ ಜನರ ದೂರಿಗೆ ಸ್ಪಂದಿಸಬೇಕಾದ ಪೊಲೀಸರು, ಫೈನಾನ್ಸ್ ನವರ ಪರ ನಿಂತಿದ್ದು, ದೂರು ನೀಡಲು ಹೋದವರಿಂದಲೂ ದಂಡ ವಸೂಲಿ ಮಾಡುತ್ತಿದ್ದಾರೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.