ಬಳ್ಳಾರಿ : ಪ್ರವಾಸೋದ್ಯಮ ಇಲಾಖೆ ವತಿಯಿಂದ 2024-25ನೇ ಸಾಲಿನಲ್ಲಿ ಎಸ್ಸಿಎಸ್ಪಿ ಮತ್ತು ಟಿಎಸ್ಪಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು ಒಂದು ತಿಂಗಳ ಉದ್ಯಮಶೀಲತೆ ತರಬೇತಿ ಹಾಗೂ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಮೊಬೈಲ್ ಕ್ಯಾಂಟಿನ್ ನಡೆಸಲು ಸಹಾಯಧನ ನೀಡಲು ಉದ್ದೇಶಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಪರಿಶಿಷ್ಟ ಜಾತಿ-04 ಮತ್ತು ಪರಿಶಿಷ್ಟ ಪಂಗಡ-04 ಅಭ್ಯರ್ಥಿಗಳು ಸೇರಿ ಒಟ್ಟು 08 ಅಭ್ಯರ್ಥಿಗಳ ಗುರಿ ನಿಗದಿಪಡಿಸಲಾಗಿದೆ. ವಿದ್ಯಾರ್ಹತೆ ಎಸ್ಎಸ್ಎಲ್ಸಿ ಉತ್ತೀರ್ಣರಾಗಿರಬೇಕು.
*ಯೋಜನೆಯ ಘಟಕ ವೆಚ್ಚ
ಮೊಬೈಲ್ ಕ್ಯಾಂಟೀನ್ ವಾಹನ ಖರೀದಿಸಲು ಇಲಾಖೆಯ ಸಹಾಯಧನ ಘಟಕ ವೆಚ್ಚದಲ್ಲಿ ಶೇ.70 ರಷ್ಟು ಗರಿಷ್ಠ ರೂ.5 ಲಕ್ಷ ಮಾತ್ರ. ಫಲಾನುಭವಿಯ ವಂತಿಗೆ ವಾಹನದ ಒಟ್ಟು ವೆಚ್ಚದ ಶೇ.5 ರಷ್ಟು. ಹಣಕಾಸು ಸಂಸ್ಥೆಗಳು, ಬ್ಯಾಂಕ್ ಸಾಲ – ವಾಹನದ ಒಟ್ಟು ವೆಚ್ಚದಲ್ಲಿ ಉಳಿದ ಮೊತ್ತ.
*ಅರ್ಹತೆ
ಅರ್ಜಿದಾರರು ಬಳ್ಳಾರಿ ಜಿಲ್ಲೆಯ ನಿವಾಸಿಯಾಗಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು. ವಯಸ್ಸು 20 ರಿಂದ 45 ವರ್ಷದೊಳಗಿರಬೇಕು. ಅಭ್ಯರ್ಥಿಗಳು ಲಘು ವಾಹನ ಚಾಲನಾ ಪರವಾನಗಿ ಪಡೆದಿರಬೇಕು. ನಗರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ರೂ.2 ಲಕ್ಷ ಮೀರಬಾರದು. ಗ್ರಾಮಾಂತರ ಪ್ರದೇಶದ ಫಲಾನುಭವಿಗಳ ವಾರ್ಷಿಕ ಆದಾಯ ರೂ.1.50 ಲಕ್ಷ ಮೀರಬಾರದು. ಯಾವುದೇ ಸರ್ಕಾರಿ ಇಲಾಖೆಯಲ್ಲಿ ಅಥವಾ ನಿಗಮ ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರಬಾರದು.
*ಬೇಕಾದ ದಾಖಲೆಗಳು:
ನಿಗದಿಪಡಿಸಿದ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಇತ್ತೀಚಿನ ಭಾವಚಿತ್ರದೊಂದಿಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಆಧಾರ್ಕಾರ್ಡ್ ಪ್ರತಿ ಕಡ್ಡಾಯವಾಗಿ ಸಲ್ಲಿಸಬೇಕು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಗ್ಗೆ ತಹಶೀಲ್ದಾರರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರದ ಪ್ರತಿ ಸಲ್ಲಿಸಬೇಕು. ಖಾಯಂ ಲಘುವಾಹನ ಚಾಲನಾ ಪರವಾನಗಿ ಪತ್ರದ ಪ್ರತಿ ಸಲ್ಲಿಸಬೇಕು.
ವಿದ್ಯಾರ್ಹತೆಯ ಬಗ್ಗೆ ಕನಿಷ್ಠ ಎಸ್ಎಸ್ಎಲ್ಸಿ ಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಪ್ರತಿ ಸಲ್ಲಿಸಬೇಕು. ಅರ್ಜಿದಾರನು ಯಾವುದೇ ಸರ್ಕಾರಿ ಇಲಾಖೆ, ನಿಗಮ, ಮಂಡಳಿಗಳಲ್ಲಿ ಖಾಯಂ ನೌಕರಿಯಲ್ಲಿರದ ಬಗ್ಗೆ ಸ್ವಯಂ ಪ್ರಮಾಣೀಕರಿಸಿ, ರೂ.50/-ರ ಬೆಲೆಯ ಛಾಪಾಕಾಗದ (ಅಫಿಡೇವಿಟ್)ದಲ್ಲಿ ನಮೂನೆ-3ರಲ್ಲಿ ಪ್ರಮಾಣ ಪತ್ರ ಸಲ್ಲಿಸಬೇಕು. ಮೇಲಿನ ಎಲ್ಲಾ ದಾಖಲಾತಿಗಳನ್ನು ಸ್ವಯಂ ದೃಢೀಕರಿಸಿ ಸಲ್ಲಿಸಬೇಕು.
ಅರ್ಜಿಗನ್ನು ವಿಜಯನಗರ ಜಿಲ್ಲೆಯ ಕಮಲಾಪುರದ ಕಮಲ ಮಹಲ್ ಹತ್ತಿರದ ಪ್ರವಾಸೋದ್ಯಮ ಇಲಾಖೆಯ ಕಚೇರಿಯಲ್ಲಿ ಪಡೆದುಕೊಂಡು ಭರ್ತಿ ಮಾಡಿ ಇದೇ ಕಚೇರಿಗೆ ಜ.31 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.08394-295640 ಗೆ ಸಂಪರ್ಕಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.