ಬೆಂಗಳೂರು: ಬೆಂಗಳೂರು ಅರಮನೆ ಮೈದಾನದ ಜಾಗ ಬಳಸಿಕೊಳ್ಳುವ ಬಗ್ಗೆ ಸುಗ್ರೀವಾಜ್ಞೆ ಹೊರಡಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಂಪುಟ ಸಭೆಯ ಬಳಿಕ ಮಾತನಾಡಿದ ಅವರು, 1996ರಲ್ಲಿ ಅರಮನೆಯನ್ನು ಸರ್ಕಾರ ಸುಪರ್ದಿಗೆ ತೆಗೆದುಕೊಳ್ಳಲು ಕಾನೂನು ತರಲಾಗಿತ್ತು. ರಾಜ್ಯಪಾಲರ ಮೂಲಕ ರಾಷ್ಟ್ರಪತಿಗೆ ಕಳುಹಿಸಲಾಗಿದ್ದು, ಅಂಗೀಕಾರವೂ ಆಗಿತ್ತು. 472 ಎಕರೆ ಭೂಮಿಗೆ ಅಂದಿನ ದರದಂತೆ 11 ಕೋಟಿ ರೂಪಾಯಿ ಮೌಲ್ಯ ನಿರ್ಧರಿಸಲಾಗಿತ್ತು ಎಂದು ಹೇಳಿದ್ದಾರೆ.
1996ರ ಭೂಸ್ವಾಧೀನ ಕಾನೂನನ್ನು ಮೈಸೂರು ಮಹಾರಾಜರು ಪ್ರಶ್ನೆ ಮಾಡಿದ್ದರು. ಹೈಕೋರ್ಟ್ ಅದನ್ನು ಎತ್ತಿ ಹಿಡಿದಿತ್ತು. ನಂತರ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರ ಜಯಮಹಲ್ ರಸ್ತೆ, ಬಳ್ಳಾರಿ ರಸ್ತೆ ಅಗಲೀಕರಣ ವೇಳೆ ಮತ್ತೆ ಚರ್ಚೆಗೆ ಬಂದಿತು. ಪ್ರತಿ ಎಕರೆಗೆ 2.3 ಲಕ್ಷ ಪರಿಹಾರ ಕೊಡಬೇಕೆಂದು ನಿರ್ಧರಿಸಲಾಗಿದ್ದು, ಇಷ್ಟು ವರ್ಷ ವ್ಯಾಜ್ಯ ನಡೆಯುತ್ತಿದ್ದರೂ ತಡೆಯಾಜ್ಞೆ ಆದೇಶ ಇಲ್ಲ ಎಂದು ಹೇಳಿದ್ದಾರೆ.