ಬೆಳಗಾವಿ: ರಾಜ್ಯದಲ್ಲಿ ಬಾಣಂತಿಯರ ಸಾವಿನ ಸರಣಿ ಮುಂದುವರೆದಿದೆ. ಅದರಲ್ಲಿಯೂ ಬೆಳಗಾವಿ ಜಿಲ್ಲೆಯಲ್ಲಿ ಬಾಣಂತಿಯರ ಸಾವು ಮತ್ತೆ ವರದಿಯಾಗಿದೆ. ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ.
ಮುತ್ತವ್ವ ಸಂತೋಷ (21) ಮೃತ ಬಾಣಂತಿ. ಮುತ್ತವ್ವಳಿಗೆ ಜನವರಿ 31ಕ್ಕೆ ಹೆರಿಗೆ ಡೇಟ್ ಕೊಡಲಾಗಿತ್ತು. ಆದರೆ ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾದ ಕಾರಣ ಅಥಣಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಿಪಿ ವ್ಯತ್ಯಾಸವಾಗಿದೆ ಎಂದು ಶಸ್ತ್ರಚಿಕಿತ್ಸೆ ಮೂಲಕ ಮಗುವನ್ನು ಹೊರತೆಗಿದಿದ್ದರು. ಈ ವೇಳೆ ಮುತ್ತವ್ವಗೆ ತೀವ್ರ ರಕ್ತಶ್ರಾವ ಶುರುವಾಗಿದೆ.
ತಾಲೂಕು ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದರು. ಅಥಣಿ ತಾಲೂಕು ಆಸ್ಪತ್ರೆಗೆ ಮುತ್ತವ್ವಳ್ಳನ್ನು ಶಿಫ್ಟ್ ಮಡುವಾಗ ಮಾರ್ಗ ಮಧ್ಯೆಯೇ ಮುತ್ತವ್ವ ಕೊನೆಯುಸಿರೆಳೆದಿದ್ದಾರೆ. ತೀವ್ರ ರಕ್ತಸ್ರಾವದಿಂದ ಬಾಣಂತಿ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.
ಆದರೆ ವೈದ್ಯರ ನಿರ್ಲಕ್ಷದಿಂದಲೇ ಮುತ್ತವ್ವ ಸಾವನ್ನಪ್ಪಿದ್ದಾಗಿ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.