ಬೆಂಗಳೂರು: ಕಳೆದ ಡಿಸೆಂಬರ್ 29ರಂದು ನಡೆದ ಕೆಎಎಸ್ ಅಧಿಕಾರಿಗಳ ನೇಮಕಾತಿಯ ಪೂರ್ವಭಾವಿ ಮರು ಪರೀಕ್ಷೆ ರದ್ದುಪಡಿಸಿ ಮತ್ತೊಮ್ಮೆ ಪರೀಕ್ಷೆ ನಡೆಸಲು ಆದೇಶಿಸುವಂತೆ ಕೋರಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲಾಗಿದ್ದು, ರಾಜ್ಯ ಸರ್ಕಾರ, ಕರ್ನಾಟಕ ಲೋಕಸೇವಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಕಾಂತಕುಮಾರ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಗುರುವಾರ ನ್ಯಾಯಮೂರ್ತಿ ಆರ್. ದೇವದಾಸ್ ಅವರಿದ್ದ ಏಕ ಸದಸ್ಯದ ಪೀಠದ ಮುಂದೆ ಬಂದಿದೆ. ಕೆಲವು ಕಾಲ ಅರ್ಜಿದಾರರ ವಾದ ಆಲಿಸಿದ ನ್ಯಾಯಾಲಯವು ರಾಜ್ಯ ಸರ್ಕಾರ, ಕೆಪಿಎಸ್ಸಿ, ಗೃಹ ಇಲಾಖೆ ಸೇರಿ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸುವಂತೆ ನೋಟಿಸ್ ನೀಡಿದ್ದು, ಜನವರಿ 30 ಕ್ಕೆ ವಿಚಾರಣೆಯನ್ನು ಮುಂದೂಡಲಾಗಿದೆ.
ಅರ್ಜಿದಾರರ ಪರ ವಕೀಲರು, ಸದ್ಯ ವಿದ್ಯಾರ್ಥಿಗಳ ಸಂಘಕ್ಕೆ ತಮ್ಮ ಬೇಡಿಕೆ ಈಡೇರಿಸುವವರೆಗೆ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಲು ಅವಕಾಶ ನೀಡಬೇಕೆಂದು ಮಾಡಿದ ಮನವಿಯನ್ನು ನ್ಯಾಯಪೀಠ ತಳ್ಳಿ ಹಾಕಿದೆ. ಧರಣಿ ಮುಂದುವರಿಸಲು ಅವಕಾಶವಿಲ್ಲ. ನೀವು ಏನೇ ಮಾಡಿದರೂ ಕಾನೂನು ಪ್ರಕಾರ ಮಾಡಿ. ಆಗ ಏನಾದರೂ ಸರ್ಕಾರ ಕ್ರಮ ಕೈಗೊಂಡರೆ ನ್ಯಾಯಾಲಯ ನಿಮ್ಮ ನೆರವಿಗೆ ಧಾವಿಸುತ್ತದೆ ಎಂದು ನ್ಯಾಯಪೀಠ ಹೇಳಿದೆ.