ನವದೆಹಲಿ: ಕಾರ್ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸುಜುಕಿ ಇಂಡಿಯಾ ಫೆಬ್ರವರಿ 1ರಿಂದ ವಿವಿಧ ಮಾದರಿಗಳ ಬೆಲೆಗಳನ್ನು 32,500 ರೂ.ವರೆಗೆ ಹೆಚ್ಚಿಸುವುದಾಗಿ ಗುರುವಾರ ಘೋಷಿಸಿದೆ.
ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚಗಳು ಮತ್ತು ಕಾರ್ಯಾಚರಣೆಯ ವೆಚ್ಚಗಳಿಗೆ ಪ್ರತಿಕ್ರಿಯೆಯಾಗಿ ಈ ಹೊಂದಾಣಿಕೆ ಮಾಡಲಾಗಿದೆ.
ಹೊಸ ಬೆಲೆ ಅಡಿಯಲ್ಲಿ ಕಾಂಪ್ಯಾಕ್ಟ್ ಕಾರ್ ಸೆಲೆರಿಯೊ ಎಕ್ಸ್-ಶೋರೂಂ ಬೆಲೆ 32,500 ರೂ. ವರೆಗೆ ಹೆಚ್ಚಳ ಆಗಲಿದೆ. ಪ್ರೀಮಿಯಂ ಮಾದರಿ ಇನ್ವಿಕ್ಟೊ 30,000 ರೂ. ವರೆಗೆ ಏರಿಕೆ ಕಾಣಲಿದೆ. ವ್ಯಾಗನ್-ಆರ್ 15,000 ರೂ. ವರೆಗೆ ಹೆಚ್ಚಾಗಲಿದ್ದು, ಸ್ವಿಫ್ಟ್ ರೂ. 5,000 ವರೆಗೆ ಹೆಚ್ಚಾಗಲಿದೆ.
SUV ವಿಭಾಗದಲ್ಲಿ ಬ್ರೆಝಾ ಮತ್ತು ಗ್ರ್ಯಾಂಡ್ ವಿಟಾರಾ ಕಾರ್ ಗಳ ಬೆಲೆ ಕ್ರಮವಾಗಿ 20,000 ರೂ. ಮತ್ತು 25,000 ರೂ.ಗಳವರೆಗೆ ಏರಿಕೆಯಾಗಲಿದೆ. ಆಲ್ಟೊ K10 ನಂತಹ ಆರಂಭಿಕ ಹಂತದ ಸಣ್ಣ ಕಾರ್ ಗಳ ಬೆಲೆ 19,500 ರೂ.ಗಳವರೆಗೆ ಮತ್ತು S-ಪ್ರೆಸ್ಸೊ ಕಾರುಗಳ ಬೆಲೆ 5,000 ರೂ.ಗಳವರೆಗೆ ಏರಿಕೆಯಾಗಲಿದೆ.
ಪ್ರೀಮಿಯಂ ಕಾಂಪ್ಯಾಕ್ಟ್ ಮಾಡೆಲ್ ಬಲೆನೊ ಬೆಲೆ 9,000 ರೂ.ಗಳವರೆಗೆ ಏರಿಕೆಯಾಗಲಿದ್ದು, ಕಾಂಪ್ಯಾಕ್ಟ್ SUV ಫ್ರಾಂಕ್ಸ್ ಬೆಲೆ 5,500 ರೂ.ಗಳವರೆಗೆ ಏರಿಕೆಯಾಗಲಿದೆ. ಕಾಂಪ್ಯಾಕ್ಟ್ ಸೆಡಾನ್ ಡಿಜೈರ್ ಬೆಲೆ 10,000 ರೂ.ಗಳವರೆಗೆ ಏರಿಕೆಯಾಗಲಿದೆ.
ಪ್ರಸ್ತುತ, ಮಾರುತಿ ಸುಜುಕಿ ವಿವಿಧ ರೀತಿಯ ವಾಹನಗಳನ್ನು ನೀಡುತ್ತಿದೆ, ಆರಂಭಿಕ ಹಂತದ ಆಲ್ಟೊ K-10 ಕಾರು 3.99 ಲಕ್ಷ ರೂ.ಗಳಿಂದ ಪ್ರಾರಂಭವಾಗಿ ಪ್ರೀಮಿಯಂ ಇನ್ವಿಕ್ಟೊ ಕಾರು 28.92 ಲಕ್ಷ ರೂ.ಗಳವರೆಗೆ ಇದೆ.