ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಸಭೆ ನಡೆದಿದೆ. ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ನಿವಾಸದಲ್ಲಿ ಸಭೆ ನಡೆದಿದೆ.
ಬೆಂಗಳೂರಿನ ಸಂಜಯನಗರದಲ್ಲಿರುವ ಡಿವಿಎಸ್ ನಿವಾಸದಲ್ಲಿ ಸಭೆ ನಡೆದಿದ್ದು, ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಸಂಸದರಾದ ಬಸವರಾಜ ಬೊಮ್ಮಾಯಿ, ಡಾ. ಕೆ. ಸುಧಾಕರ್, ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದಾರೆ.
ಕೋರ್ ಕಮಿಟಿ ಸಭೆಯ ಜಟಾಪಟಿಯ ನಂತರ ಡಿವಿಎಸ್ ನಿವಾಸದಲ್ಲಿ ಹಿರಿಯ ನಾಯಕರ ಸಭೆ ನಡೆದಿರುವುದು ಭಾರಿ ಕುತೂಹಲ ಮೂಡಿಸಿದೆ.
ರಾಜ್ಯ ಬಿಜೆಪಿಯಲ್ಲಿ ಬಿ.ವೈ. ವಿಜಯೇಂದ್ರ, ಯತ್ನಾಳ್ ಬಣಗಳ ತಿಕ್ಕಾಟದ ನಡುವೆ ಇಂದು ಶ್ರೀರಾಮುಲು ಅಸಮಾಧಾನ ಸ್ಪೋಟಗೊಂಡಿದೆ. ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಎಲ್ಲರನ್ನೂ ಸಮಾಧಾನಪಡಿಸಲು ಪ್ರಯತ್ನ ನಡೆಸಿದ್ದಾರೆ. ಆದರೆ ಇದೇ ವೇಳೆ ಡಿ.ವಿ. ಸದಾನಂದಗೌಡರ ನಿವಾಸದಲ್ಲಿ ಮತ್ತೊಂದು ಸಭೆ ನಡೆದಿರುವುದು ರಾಜಕೀಯ ವಲಯಲ್ಲಿ ಚರ್ಚೆಗೆ ಕಾರಣವಾಗಿದೆ.