ಕಲಬುರಗಿ: ಬಾಲಕಿ ಮೇಲೆ ಹಲ್ಲೆ ನಡೆಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಯುವಕನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆತನ ಸಹೋದರನಿಗೆ 10 ವರ್ಷ ಶಿಕ್ಷೆ ನೀಡಿದ್ದು, ಕೃತ್ಯಕ್ಕೆ ಸಹಕರಿಸಿದ ತಂದೆಗೆ ಆರು ತಿಂಗಳ ಸಾದಾ ಶಿಕ್ಷೆ ವಿಧಿಸಿ ಕಲಬುರಗಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್(ವಿಶೇಷ ಪೋಕ್ಸೋ) ನ್ಯಾಯಾಲಯ ತೀರ್ಪು ನೀಡಿದೆ.
ಕಲಬುರಗಿ ತಾಲೂಕಿನ ಫರಹತಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯ ತಾಂಡಾವೊಂದರ ನಿವಾಸಿ ರವಿ ಭಾವುರಾಯ(21), ಆತನ ಸಹೋದರ ಶಿವರಾಜ ಭಾವುರಾಯ(23) ಮತ್ತು ಅವರ ತಂದೆ ಭಾವುರಾಯ ರಾಥಡ(50) ಶಿಕ್ಷೆಗೆ ಒಳಗದ ಅಪರಾಧಿಗಳಾಗಿದ್ದಾರೆ.
15 ವರ್ಷದ ಬಾಲಕಿಯನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದ ರವಿ ಮನೆಗೆ ಬಾಲಕಿಯ ಕುಟುಂಬದವರು ಬುದ್ಧಿವಾದ ಹೇಳಲು ಹೋಗಿದ್ದ ವೇಳೆ ಗಲಾಟೆ ನಡೆಸಿದ ಮೂವರು ಅಪರಾಧಿಗಳು ಅವಾಚ್ಯ ಪದಗಳಿಂದ ನಿಂದಿಸಿ ಬಾಲಕಿಯ ತಂದೆ ಮೇಲೆ ಕೊಡಲಿಯಿಂದ ಹೊಡೆದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದರು.
ನಂತರದಲ್ಲಿ ಘಟನೆಗೆ ಸಂಬಂಧಿಸಿದಂತೆ ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಕೊಲೆ ಬೆದರಿಕೆ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಪಿಐ ರಾಘವೇಂದ್ರ ತನಿಖೆ ನಡೆಸಿ ಕೋರ್ಟ್ ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಾದ ಪ್ರತಿವಾದ ಆಲಿಸಿದ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್(ವಿಶೇಷ ಪೋಕ್ಸೋ) ನ್ಯಾಯಾಲಯ ನ್ಯಾಯಾಧೀಶ ಯಮನಪ್ಪ ಬಮ್ಮಣಗಿ ಅವರು ರವಿಗೆ ಕಠಿಣ ಜೀವಾವಧಿ ಶಿಕ್ಷೆ, 63,000 ರೂ. ದಂಡ ವಿಧಿಸಿದ್ದಾರೆ. ಶಿವರಾಜನಿಗೆ 10 ವರ್ಷ ಜೈಲು ಶಿಕ್ಷೆ, 60,000 ದಂಡ ಹಾಗೂ ಭಾವುರಾಯನಿಗೆ 6 ತಿಂಗಳು ಸಾದಾ ಶಿಕ್ಷೆ, 500 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶಾಂತವೀರ ಬಿ. ತುಪ್ಪದ ಅವರು ವಾದ ಮಂಡಿಸಿದ್ದರು.