ವಾಷಿಂಗ್ಟನ್: ಡಾಲರ್ ಬದಲು ಪರ್ಯಾಯ ಕರೆನ್ಸಿ ಬಳಸಿದರೆ ಶೇಕಡ 100ರಷ್ಟು ಆಮದು ಸುಂಕ ವಿಧಿಸಲಾಗುವುದು ಎಂದು ಬ್ರಿಕ್ಸ್ ದೇಶಗಳಿಗೆ ಅಮೆರಿಕ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಅಧಿಕಾರಾವಧಿಯ ಮೊದಲ ದಿನವೇ ಭಾರತ ಸೇರಿ 10 ಬ್ರಿಕ್ಸ್ ದೇಶಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಿರುವ ಅವರು, ಬ್ರಿಕ್ಸ್ ದೇಶಗಳು ತಮ್ಮ ಅಂತರಾಷ್ಟ್ರೀಯ ವ್ಯಾಪಾರಕ್ಕೆ ಅಮೆರಿಕದ ಡಾಲರ್ ಬದಲು ಬೇರೆ ಕರೆನ್ಸಿ ಬಳಸಲು ಯತ್ನಿಸಿದಲ್ಲಿ ಅಂತಹ ದೇಶಗಳಿಗೆ ಅಮೆರಿಕದ ಜೊತೆ ನಡೆಸುವ ವ್ಯವಹಾರಕ್ಕೆ ಶೇಕಡ 100ರಷ್ಟು ಸುಂಕ ವಿಧಿಸಲಾಗುವುದು ಎಂದು ತಿಳಿಸಿದ್ದಾರೆ.
ತಮ್ಮ ಅಧಿಕಾರದ ಅವಧಿಯ ಮೊದಲ ದಿನವೇ ಕಠಿಣ ವಲಸೆ ನೀತಿ ಸೇರಿದಂತೆ ಅನೇಕ ಕಾರ್ಯಾದೇಶಗಳಿಗೆ ಅವರು ಸಹಿ ಹಾಕಿದ್ದಾರೆ.
ಬ್ರಿಕ್ಸ್ ಮೈತ್ರಿಕೂಟವು ಅಮೆರಿಕ ಹೊರತಾದ ಅಂತರಾಷ್ಟ್ರೀಯ ಒಕ್ಕೂಟವಾಗಿದ್ದು, ಇದರಲ್ಲಿ ಭಾರತ, ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಇರಾನ್ ಮತ್ತು ಅರಬ್ ಸಂಯುಕ್ತ ಸಂಸ್ಥಾನ ಸೇರಿ 10 ದೇಶಗಳಿವೆ.
ಟ್ರಂಪ್ ಸಹಿ ಹಾಕಿದ ಕಠಿಣ ಕಾರ್ಯಾದೇಶಗಳು:
ಅಕ್ರಮ ವಲಸಿಗರ ವಿರುದ್ಧ ಸಮರ ಸಾರಿ ಆದೇಶ, ದಾಖಲೆ ರಹಿತ 7.25 ಲಕ್ಷ ಭಾರತೀಯರ ಭವಿಷ್ಯ ಅತಂತ್ರ
ಅಜನ್ಮ ಪೌರತ್ವ ಹಕ್ಕನ್ನು ರದ್ದುಗೊಳಿಸುವ ಆದೇಶ
10 ಲಕ್ಷಕ್ಕೂ ಹೆಚ್ಚು ಜನರು ಅಮೆರಿಕಕ್ಕೆ ಕಾನೂನು ಬದ್ಧವಾಗಿ ಪ್ರವೇಶಿಸಲು ಅವಕಾಶ ಮಾಡಿಕೊಟ್ಟಿದ್ದ ಬೈಡನ್ ಸರ್ಕಾರದ ಸಿಬಿಪಿ ಒನ್ ಆ್ಯಪ್ ಸ್ಥಗಿತ
ಕೊರೋನಾ ನಿರ್ವಹಣೆಯಲ್ಲಿ ವೈಫಲ್ಯ ಆರೋಪಿಸಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಅಧಿಕೃತವಾಗಿ ಹೊರಕ್ಕೆ
ಹವಾಮಾನ ರಕ್ಷಣೆ ಕುರಿತಾದ ಪ್ಯಾರಿಸ್ ಒಪ್ಪಂದದಿಂದ ಕೂಡ ಅಮೆರಿಕ ಹೊರಕ್ಕೆ
ವಿದ್ಯುತ್ ಚಾಲಿತ ವಾಹನ ನೀತಿಗೆ ತೆರೆ ಎಳೆದಿದ್ದು ಮತ್ತೆ ಪೆಟ್ರೋಲ್, ಡೀಸೆಲ್ ಆಧಾರಿತ ವಾಹನಗಳ ಉತ್ಪಾದನೆ ಬಳಕೆಗೆ ಒತ್ತು ನೀಡಲಾಗಿದೆ.