ತುಮಕೂರು: ದೂರು ನೀಡಲು ಕಚೇರಿಗೆ ಬಂದಿದ್ದ ಮಹಿಳೆ ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪದಡಿ ಅಮಾನತುಗೊಂಡು ಜೈಲು ಸೇರಿದ್ದ ಡಿವೈಎಸ್ಪಿ ಎ. ರಾಮಚಂದ್ರಪ್ಪ ಅವರಿಗೆ ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ದೊರೆತಿದೆ. ಆದರೆ, ಜಾಮೀನು ಪಡೆದು ಬಿಡುಗಡೆಯಾಗಿ ಹೊರ ಬರುತ್ತಿದ್ದಂತೆ ಮತ್ತೊಂದು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ರಾಮಚಂದ್ರಪ್ಪ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಮೇಲೆಯೂ ಡಿವೈಎಸ್ಪಿ ಎ. ರಾಮಚಂದ್ರಪ್ಪ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಮತ್ತೊಬ್ಬ ಮಹಿಳೆ ದೂರು ನೀಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಧುಗಿರಿ ಠಾಣೆ ಪೊಲೀಸರು ಬಂಧಿಸಿ ತುಮಕೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2 ಲಕ್ಷ ರೂ. ಬಾಂಡ್ ಮತ್ತು ಷರತ್ತುಬದ್ಧ ನಿಯಮಗಳ ಅನ್ವಯ ನ್ಯಾಯಾಧೀಶರಾದ ಕೆ. ಯಾದವ್ ಗುರುವಾರ ಜಾಮೀನು ಮಂಜೂರು ಮಾಡಿದ್ದರು. ಮಧುಗಿರಿ ನ್ಯಾಯಾಲಯಕ್ಕೆ ಶನಿವಾರ ಶೂರಿಟಿ ಬಾಂಡ್ ಸೇರಿದಂತೆ ಇಬ್ಬರ ಜಾಮೀನಿನ ಮೇರೆಗೆ ರಾಮಚಂದ್ರಪ್ಪ ಹೊರ ಬಂದಿದ್ದರು. ಅವರನ್ನು ಮಧುಗಿರಿ ಠಾಣೆ ಪೊಲೀಸರು ಮತ್ತೊಂದು ಪ್ರಕರಣದಲ್ಲಿ ಬಂಧಿಸಿದ್ದಾರೆ.