ಬೆಂಗಳೂರು : ಸಹಕಾರ ಇಲಾಖೆಯು 2025–26ನೇ ಸಾಲಿನ ಯಶಸ್ವಿನಿ ಯೋಜನೆಗೆ ಅರ್ಹ ಸಹಕಾರಿಗಳನ್ನು ನೋಂದಣಿ ಮಾಡಿಕೊಳ್ಳಲು ಜ.31 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಸಮಾಪನಗೊಂಡಿರುವ, ನಿಷ್ಕ್ರಿಯವಾಗಿರುವ ಸಹಕಾರ ಸಂಘಗಳ ಸದಸ್ಯರು, ನೌಕರರ ಸಹಕಾರ ಸಂಘಗಳ ಸದಸ್ಯರು ಯೋಜನೆಗೆ ಅರ್ಹರಾಗಿರುವುದಿಲ್ಲ.ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯ ಸರ್ಕಾರಿ ನೌಕರರಾಗಿದ್ದರೂ ಸೌಲಭ್ಯ ಸಿಗುವುದಿಲ್ಲ. ಈಗಾಗಲೇ ಒಂದು ಯೋಜನೆ ಅಡಿ ಆರೋಗ್ಯ ಸೌಲಭ್ಯ ಪಡೆಯುತ್ತಿರುವವರು ಯಶಸ್ವಿನಿ ಅಡಿ ನೋಂದಾಯಿಸಿಕೊಳ್ಳುವಂತಿಲ್ಲ ಎಂದು ವಿವರಿಸಲಾಗಿದೆ.
ಗ್ರಾಮೀಣ ಪ್ರದೇಶದ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ ಆ ಕುಟುಂಬ 500 ರೂಗಳ ವಂತಿಗೆ ಭರಿಸಬೇಕು. ನಾಲ್ಕಕ್ಕಿಂತ ಹೆಚ್ಚು ಸದಸ್ಯರಿದ್ದರೆ ತಲಾ 100 ರೂಗಳ ಹೆಚ್ಚುವರಿ ವಂತಿಗೆ ನೀಡಬೇಕು. ನಗರ ಪ್ರದೇಶದ ಒಂದು ಕುಟುಂಬದಲ್ಲಿ ನಾಲ್ಕು ಜನರಿದ್ದರೆ 1,000 ರೂಗಳು ಹಾಗೂ ಅದಕ್ಕಿಂತ ಹೆಚ್ಚು ಜನರಿದ್ದರೆ ತಲಾ 200 ರೂಗಳು ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರು ಉಚಿತವಾಗಿ ಸದಸ್ಯತ್ವ ಪಡೆಯಬಹುದು.
ಈ ಯೋಜನೆ ಅಡಿ 1650 ವಿವಿಧ ಚಿಕಿತ್ಸೆಗಳು, 478 ಐಸಿಯು ಚಿಕಿತ್ಸೆಗಳು ಸೇರಿ ಒಟ್ಟು 2,128 ಚಿಕಿತ್ಸೆಗಳಿಗೆ ನಗದುರಹಿತ ಸೌಲಭ್ಯ ದೊರಕಲಿದೆ ಎಂದು ಸಹಕಾರ ಇಲಾಖೆ ಹೇಳಿದೆ.
ಸಹಕಾರ ಇಲಾಖೆ ವತಿಯಿಂದ ರಾಜ್ಯದ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಸಹಕಾರಿಗಳಿಗೆ ಯಶಸ್ವಿನಿ ಯೋಜನೆಯ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಲಾಗುವುದು.ದಿ: 1/1/2024 ರಿಂದ ಯಶಸ್ವಿನಿ ನೋಂದಣಿ ಆರಂಭಗೊಂಡಿದ್ದು, ದಿ: 01-04-2025 ರಿಂದ 31/3/2026 ರವರೆಗೆ ಚಿಕಿತ್ಸಾ ಅವಧಿ ಚಾಲ್ತಿಯಲ್ಲಿರುತ್ತದೆ. ಸಹಕಾರ ಸಂಘದ ಸದಸ್ಯರು ಆದಷ್ಟು ಬೇಗ ಗ್ರಾಮಾಂತ ಸಹಕಾರ ಸಂಘಗಳ ಗರಿಷ್ಟ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ ರೂ.500, 4 ಕ್ಕಿಂತ ಹೆಚ್ಚಿನ ಸದಸ್ಯರಿದಲ್ಲಿ ತಲಾ ರೂ.100 ಹಾಗೂ ನಗರದ 4 ಸದಸ್ಯರ ಕುಟಂಬಕ್ಕೆ ವಾರ್ಷಿಕ ರೂ.1000 ನಿಗದಿ ಮಾಡಿದ್ದು, 4 ಕ್ಕಿಂತ ಹೆಚ್ಚಿನ ಸದಸ್ಯರಿದಲ್ಲಿ ತಲಾ ರೂ.200 ಗಳಂತೆ ಮೊತ್ತ ಪಾವತಿಸಿ ನೊಂದಣಿ ಮಾಡಿಕೊಳ್ಳಬೇಕು.
ಯಶಸ್ವಿನಿ ಯೋಜನೆಯಲ್ಲಿ ಮುಖ್ಯವಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳು ಹಾಗೂ ಕಿವಿ, ಮೂಗು, ಗಂಟಲು ವ್ಯಾದಿಗಳು, ಕರುಳಿನ ಖಾಯಿಲೆಗಳು, ನರಗಳಿಗೆ ಸಂಬಂಧಿಸಿದ, ಕಣ್ಣಿನ, ಮೂಳೆ ರೋಗಗಳು, ಸ್ತ್ರೀಯರಿಗೆ ಸಂಬಂಧಿಸಿದ ಖಾಯಿಲೆಗಳಿಗೆ ಚಿಕಿತ್ಸಾ ಸೌಲಭ್ಯವಿರುತ್ತದೆ.
ಈ ಯೋಜನೆಯಡಿಯಲ್ಲಿ ಒಂದು ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿಯು ರೂ.5 ಲಕ್ಷಕ್ಕೆ ನಿಗದಿಪಡಿಸಿಲಾಗಿರುತ್ತದೆ. ಸಹಕಾರ ಸಂಘದ ಸದಸ್ಯರಿಗೆ ರಾಜ್ಯದ ಯಶಸ್ವಿನಿ ನೆಟ್ವರ್ಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯಗಳನ್ನು ನೀಡಲು ನಿರ್ಧರಿಸಿದ್ದು, ಫಲಾನುಭವಿಗಳು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆÀ ದಾಖಲಾಗುವ ಸಂದರ್ಭದಲ್ಲಿ ನೆಟ್ವರ್ಕ್ ಆಸ್ಪತ್ರೆಗಳ ಮಾಹಿತಿಯನ್ನು ಮತ್ತು ಯೋಜನೆ ಅನ್ವಯವಾಗಿರುವುದನ್ನು ಆಸ್ಪತ್ರೆಗಳಲ್ಲಿ ಖಚಿತ ಪಡೆಸಿಕೊಂಡು ಚಿಕಿತ್ಸೆ ಪಡೆಯತಕ್ಕದಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸದಸ್ಯರು ಚಿಕಿತ್ಸೆ ಪಡೆಯುವಾಗ ಪ್ರತಿಯೊಬ್ಬರು ತಮ್ಮ ಜಾತಿ ಪ್ರಮಾಬದ ಆರ್ಡಿ ನಂಬರ್ ತರುವುದು ಕಡ್ಡಾಯವಾಗಿದೆ.