ಬೆಂಗಳೂರು: ಕೆಎಸ್ಆರ್ಟಿಸಿ ಸಿಬ್ಬಂದಿಗಾಗಿ ಆರಂಭಿಸಲಾದ ನಗದು ರಹಿತ ವೈದ್ಯಕೀಯ ಸೇವೆ ಒದಗಿಸುವ ಕೆಎಸ್ಆರ್ಟಿಸಿ ಆರೋಗ್ಯ ಯೋಜನೆಗೆ ಜಾರಿಯಾದ 10 ದಿನದಲ್ಲಿ 1280 ಸಿಬ್ಬಂದಿ ವಿವಿಧ ಆಸ್ಪತ್ರೆಗಳಲ್ಲಿ ನಗದು ರಹಿತವಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.
ಕೆಎಸ್ಆರ್ಟಿಸಿ ಆರೋಗ್ಯ ಯೋಜನೆಯಡಿ ಸಾರಿಗೆ ನೌಕರರಿಗೆ ನಗದು ರಹಿತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗುತ್ತಿದ್ದು, ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ರಾಜ್ಯಾದ್ಯಂತ 314 ಆಸ್ಪತ್ರೆಗಳೊಂದಿಗೆ ಕೆಎಸ್ಆರ್ಟಿಸಿ ಒಪ್ಪಂದ ಮಾಡಿಕೊಂಡಿದೆ.
ಜನವರಿ 17ರಂದು ಬೆಳಿಗ್ಗೆ 11 ಗಂಟೆಯವರೆಗೆ 1280 ಸಾರಿಗೆ ಸಿಬ್ಬಂದಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 243 ಸಿಬ್ಬಂದಿ ಒಳರೋಗಿಗಳಿಗಾಗಿ ಚಿಕಿತ್ಸೆ ಪಡೆದಿದ್ದು 56.56 ಲಕ್ಷ ರೂ., ಹೊರರೋಗಿ ವಿಭಾಗದಲ್ಲಿ ದಾಖಲಾದ 1047 ಸಿಬ್ಬಂದಿಗೆ 11.66 ಲಕ್ಷ ರೂಪಾಯಿ ವ್ಯಯಿಸಲಾಗಿದೆ ಎಂದು ಕೆಎಸ್ಆರ್ಟಿಸಿ ತಿಳಿಸಿದೆ.
ನಿಗಮದ 34,000 ಸಿಬ್ಬಂದಿ ಅವರ ಪತಿ, ಪತ್ನಿ, ಮಕ್ಕಳು, ತಂದೆ- ತಾಯಿಯನ್ನು ಒಳಗೊಂಡಂತೆ 1.50 ಲಕ್ಷ ಪಲಾನುಭವಿಗಳು ಪ್ರಯೋಜನ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.