ಬೆಂಗಳೂರು: ಕಾಂಗ್ರೆಸ್‌ನಲ್ಲಿ ಕುರ್ಚಿಗಾಗಿ ಕಾದಾಟ ಜೋರಾಗಿದೆ. ಹಾಗಾಗಿ ಜನರ ಪಾಲಿಗೆ ಸರ್ಕಾರದ ನೆರವು ಮರೀಚಿಕೆಯಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಒಂದು ಕಡೆ ಸಚಿವರಾದ ಸತೀಶ್ ಜಾರಕಿಹೊಳಿ-ಲಕ್ಷ್ಮಿ ಹೆಬ್ಬಾಳ್ಕರ್ ನಡುವೆ ಕಲಹವಿದ್ದರೆ, ಮತ್ತೊಂದು ಕಡೆ ಡಿಸಿಎಂ ಡಿ.ಕೆ.ಶಿವಕುಮಾರ್-ಸಚಿವ ಜಾರಕಿಹೊಳಿ ನಡುವೆ ಕಲಹವಿದೆ. ಎರಡೂವರೆ ವರ್ಷಕ್ಕೆ ಅಧಿಕಾರ ಹಸ್ತಾಂತರವಾಗಬೇಕೆಂದು ಒಪ್ಪಂದವಾದರೂ ಸಿಎಂ ಸಿದ್ದರಾಮಯ್ಯ ಅವರಿಗೆ ಅಧಿಕಾರ ಹಸ್ತಾಂತರಿಸಲು ಮನಸ್ಸಿಲ್ಲ. ಅದಕ್ಕಾಗಿ ಸಚಿವರನ್ನು ಛೂ ಬಿಟ್ಟಿದ್ದಾರೆ. ಡಿ.ಕೆ.ಶಿವಕುಮಾರ್ ಒಬ್ಬಂಟಿಯಾಗಿದ್ದಾರೆ. ಅದಕ್ಕಾಗಿ ಅವರೀಗ ಹೈಕಮಾಂಡ್ ಪಾದದ ಬಳಿ ಕೂತಿದ್ದಾರೆ ಎಂದು ವ್ಯಂಗ್ಯವಾಡಿದರು.
ಡಿ.ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬಿಡಲು ಸಿದ್ಧವಿಲ್ಲ. ಇವೆಲ್ಲದರಿಂದಾಗಿ ಯಾರೂ ಜನರ ಪರವಾಗಿ ಮಾತಾಡುತ್ತಿಲ್ಲ. ಗುತ್ತಿಗೆದಾರರು ದಯಾಮರಣಕ್ಕೆ ಕೋರಿದ್ದರೆ, ಆಸ್ಪತ್ರೆಗಳಲ್ಲಿ ಬಾಣಂತಿಯರ ಸಾವಾಗುತ್ತಿದೆ. ಎಲ್ಲರೂ ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ಜನರ ಪಾಲಿಗೆ ಸರ್ಕಾರದ ನೆರವು ಇಲ್ಲದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕದ ಆರ್ಥಿಕ ಪರಿಸ್ಥಿತಿಯನ್ನು ಸಿಎಂ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಇಂತಹ ಬಣ ಬಡಿದಾಟ ಮುಂದುವರಿದರೆ ಪರಿಸ್ಥಿತಿ ಇನ್ನಷ್ಟು ಹೀನಾಯವಾಗಲಿದೆ ಎಂದರು.