ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ರಾಜಸ್ಥಾನದ ಮೆಹಂದಿಪುರದ ಬಾಲಾಜಿ ಪಟ್ಟಣದ ಧರ್ಮಶಾಲಾ ಗೆಸ್ಟ್ ಹೌಸ್ ನಲ್ಲಿ ನಡೆದಿದೆ.
ತಂದೆ-ತಾಯಿ ಹಾಗೂ ಇಬರು ಮಕ್ಕಳು ಅತಿಥಿಗೃಹದಲ್ಲಿಯೇ ಸಾವನ್ನಪ್ಪಿದ್ದು, ಶವವಾಗಿ ಪತ್ತೆಯಾಗಿದ್ದಾರೆ. ಮೃತರು ಉತ್ತರಾಖಂಡದ ಡೆಹ್ರಾಡೂನ್ ನ ರಾಯ್ ಪುರ ಮೂಲದವರು ಎಂದು ತಿಳಿದುಬಂದಿದೆ.
ಧರ್ಮಶಾಲಾದಲ್ಲಿ ಜನವರಿ 12ರಂದು ರಾಧಾಕೃಷ್ಣ ಆಶ್ರಮದ ಕೊಠಡಿಯನ್ನು ಬಾಡಿಗೆಗೆ ಪಡೆದಿದ್ದರು. ಜನವರಿ 14ರಂದು ಚೆಕ್ ಔಟ್ ಮಾಡುವುದಾಗಿ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಜೆ ಸಿಬ್ಬಂದಿಗಳು ಬಂದು ಕೊಠಡಿ ಬಳಿ ನೋಡಿದರೆ ಯಾರೂ ಸ್ಪಂದಿಸುತ್ತಿರಲಿಲ್ಲ. ಈ ಬಗ್ಗೆ ಸಿಬ್ಬಂದಿ ಮ್ಯಾನೇಜರ್ ಗೆ ಮಾಹಿತಿ ನೀಡಿದ್ದಾರೆ. ಮ್ಯಾನೇಜರ್ ಸ್ಥಳಕ್ಕಾಗಮಿಸಿ ಕೊಠಡಿ ತೆರೆದು ನೋಡಿದಾಗ ನಾಲ್ವರು ಶವವಾಗಿ ಬಿದ್ದಿದ್ದರು.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇಬ್ಬರ ಶವ ನೆಲದ ಮೇಲೆ ಪತ್ತೆಯಗೈದ್ದು, ಇನ್ನಿಬ್ಬರ ಶವ ಹಾಸಿಗೆ ಮೇಲೆ ಮಲಗಿದ್ದ ರೀತಿಯಲ್ಲಿ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.