ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಂಚಕರ ಜಾಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಗದು ಹಣ ಹೂಡಿಕೆ ಮಾಡಿದರೆ ಹಣ ಡಬ್ಲಿಂಗ್ ಮಾಡಿ ಕೊಡುವುದಾಗಿ ಹೇಳಿ ಬರೋಬ್ಬರಿ 2 ಕೋಟಿ ರೂಪಾಯಿ ವಂಚಿಸಿದ್ದ ವಂಚಕರ ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದಾರೆ.
PWD ಕಾಂಟ್ರ್ಯಾಕ್ಟರ್ ನವೀನ್ ಜೆ ಎಂಬುವವರಿಗೆ ಮಲೇಷಿಯಾ ಕಂಪನಿ ಹೆಸರಲ್ಲಿ ವಿಕ್ಕಿ ಅಹುಜಾ ಎಂಬಾತ ಪರಿಚಯನಾಗಿ ಹಣ ಹೂಡಿಕೆ ಮಾಡುವಂತೆ ಹೇಳಿ ಆಮಿಷವೊಡ್ಡಿದ್ದ. ಇದನ್ನು ನಂಬಿ ಹಣ ಹೂಡಿಕೆ ಮಾಡಿದ್ದ ನವೀನ್ ಜೆ ಎಂಬುವವರಿಗೆ ಹಂತ ಹಂತವಾಗಿ ವಂಚಕರ ಗುಂಪು 2 ಕೋಟಿ ರೂಪಾಯಿ ವಂಚಿಸಿತ್ತು.
ನಕಲಿ ಕಂಪನಿ ಹೆಸರಲ್ಲಿ, ಮಧ್ಯವರ್ತಿಗಳ ಮೂಲಕ ಆರೋಪಿ ಕೋಟಿ ಕೋಟಿ ಹಣವನ್ನು ವಂಚಿಸಿದ್ದ. ಮೋಸ ಹೋದ ನವೀನ್ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ತನಿಖೆ ನಡೆಸಿದ ಪೊಲೀಸರು ಒಟ್ಟು 7 ಆರೋಪಿಗಳನ್ನು ಬಂಧಿಸಿದ್ದಾರೆ. ನಕಲಿ ಕಂಪನಿ ತೆರೆದು ಹೂಡಿಕೆ ಹೆಸರಲ್ಲಿ ವಂಚಿಸುವುದೇ ಈ ಗ್ಯಾಂಗ್ ನ ಕೆಲಸವಾಗಿದೆ.
ಶ್ಯಾಮ್ ಥಾಮಸ್, ಜೋಸ್ ಕುರುವಿಲ್ಲ, ಜೀನ್ ಕಮಲ್, ಜಾಫರ್, ವಿಜಯ್ ಚಿಪ್ಲೋಂಕರ್, ಅಮಿತ್, ಊರ್ವಶಿ ಬಂಧಿತರು. ಪ್ರಮುಖ ಆರೋಪಿ ವಿಕ್ಕಿ ಅಹುಜಾಗಾಗಿ ಹುಡುಕಾಟ ನಡೆಸಲಾಗುತ್ತಿದೆ.