ಬೆಂಗಳೂರು : ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದು ಅವಧೂತ ವಿನಯ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ವಿನಯ್ ಗುರೂಜಿ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಆಗುವ ಯೋಗವಿದೆ. ಸಿಎಂ ಆಗಬೇಕು ಎಂಬುದು ನಮ್ಮ ಇಚ್ಚೆಯಾಗಿದೆ. ಗುರುಗಳ ದಯೆಯಿಂದ ಅವರು ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ನಾಯಕರ ಸಾಲು ಸಾಲು ಡಿನ್ನರ್ ಮೀಟಿಂಗ್, ಪಕ್ಷದೊಳಗಿನ ಗೊಂದಲಗಳ ನಡುವೆ ಡಿಸಿಎಂ ಡಿ.ಕೆ.ಶಿವಕುಮಾರ್ ಟೆಂಪಲ್ ರನ್ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ವಿನಯ್ ಗುರೂಜಿ ಹೇಳಿಕೆ ಮಹತ್ವ ಪಡೆದಿದೆ.
ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿ, ಸಮಾಧಾನಕ್ಕಾಗಿ ಹೋಮ : ಡಿಸಿಎಂ ಡಿಕೆಶಿ
ನನ್ನ ರಕ್ಷಣೆಗಾಗಿ, ಮನಸ್ಸಿನ ನೆಮ್ಮದಿ, ಸಮಾಧಾನಕ್ಕಾಗಿ ಹೋಮ ಮಾಡಿಸಿದ್ದೇನೆ. ನಾನು ಪ್ರತಿದಿನವೂ ಪೂಜೆ, ದೇವರ ದರ್ಶನ ಮಾಡುವ ವ್ಯಕ್ತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರದ ವೆಂಕಟೇಶ್ವರ ದೇಗುಲದಲ್ಲಿ ದೇವರ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ತಮಿಳುನಾಡಿನ ದೇವಸ್ಥಾನಕ್ಕೆ ಭೇಟಿ ಹಾಗೂ ವಿಶೇಶ ಪೂಜೆ ಬಗ್ಗೆ ಪ್ರತಿಕ್ರಿಯಿಸಿ, ದೇವರ ಮೇಲೆ ನಂಬಿಕೆಯಿಟ್ಟಿರುವ ವ್ಯಕ್ತಿ ನಾನು. ನನಗೆ ಧರ್ಮ, ದೇವರು, ನಮ್ಮ ಆಚರಣೆಗಳ ಮೇಲೆ ನಂಬಿಕೆಯಿದೆ. ಇದರಲ್ಲಿ ಯಾವುದೇ ವಿಶೇಷವಿಲ್ಲ. ನಾನು ಪ್ರತಿದಿನ ದೇವರಿಗೆ ನಮಸ್ಕಾರ ಮಾಡದೇ ಮನೆಯಿಂದ ಹೊರಗೆ ಬರುವುದಿಲ್ಲ. ನಾನು ಯಾವ ಶಕ್ತಿಯನ್ನು ನಂಬುತ್ತೇನೆಯೊ ಅದರ ಮೇಲೆ ಭಕ್ತಿ, ಪ್ರೀತಿ ಇದ್ದೇ ಇರುತ್ತದೆ ಎಂದು ಹೇಳಿದರು.