ಬೆಂಗಳೂರು: ಅರಣ್ಯ ಇಲಾಖೆಯಲ್ಲಿ ಮಹತ್ವದ ಬದಲಾವಣೆ ಜಾರಿಗೆ ತರಲಾಗಿದ್ದು, ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತಲೆ, ಕಳ್ಳಬೇಟೆ, ಅತಿಕ್ರಮ ಪ್ರವೇಶ ಇತ್ಯಾದಿ ಅರಣ್ಯ ಅಪರಾಧಗಳ ತಡೆಗೆ ಗರುಡಾಕ್ಷಿ ಅಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಅರಣ್ಯ ಇಲಾಖೆ Wild Life Trust of India (WTI) ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿರುವ ಗರುಡಾಕ್ಷಿ ಆನ್‌ಲೈನ್ / ಡಿಜಿಟಲ್ FIR ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು, ಅರಣ್ಯ ಅಪರಾಧ ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆ ಆಗುವುದನ್ನು ಖಾತ್ರಿ ಪಡಿಸಲು ಹಾಗೂ ಆ ಮೂಲಕ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಪೊಲೀಸ್ ಇಲಾಖೆಯಲ್ಲಿ ಇರುವ ರೀತಿಯಲ್ಲೇ ಅರಣ್ಯ ಇಲಾಖೆಯ್ಲೂ ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿಗೆ ತರಲು ತಂತ್ರಾಂಶ ರೂಪಿಸುವಂತೆ 22.09.2023ರಲ್ಲಿಯೇ ಸೂಚನೆ ನೀಡಿದ್ದೆ, ಇಂದು ಕಾರ್ಯರೂಪಕ್ಕೆ ಬಂದಿದೆ ಎಂದರು. ಈ ತಂತ್ರಾಂಶ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣಾ ಕಾನೂನುಗಳ ಅಡಿಯಲ್ಲಿ ಅರಣ್ಯ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಪರಿಣಾಮಕಾರಿಯಾಗಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ. ಪ್ರಸ್ತುತ ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ (Pilot) ಜಾರಿಗೊಳಿಸಲಾಗುತ್ತದೆ. ಈ ತಂತ್ರಾಂಶದ ಕಾರ್ಯನಿರ್ವಹಣೆಯ ಬಗ್ಗೆ ಕ್ಷೇತ್ರ ಮಟ್ಟದ ಪ್ರತಿಕ್ರಿಯೆ ಆಧಾರದ ಮೇಲೆ ಇನ್ನೂ ಹೆಚ್ಚು ಕ್ರಿಯಾಶೀಲಗೊಳಿಸಿ ಹಂತ ಹಂತವಾಗಿ ರಾಜ್ಯದ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುವುದು ಮತ್ತು ಆಫ್.ಐ.ಆರ್. ಅನ್ನೂ ಗರುಡಾಕ್ಷಿ ತಂತ್ರಾಂಶದ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.
ಇಷ್ಟು ದಿನ ಎ-4 ಹಾಳೆಯ ಅರ್ಧಭಾಗದಷ್ಟು ಅಳತೆಯ ಎಫ್.ಐ.ಆರ್. ನಲ್ಲಿ ಕಾರ್ಬನ್ ಶೀಟ್ ಹಾಕಿ ಕೈಬರಹದಲ್ಲಿ ಪ್ರಕರಣ ದಾಖಲಿಸಲಾಗುತ್ತಿತ್ತು. ಸಾವಿರಾರು ಪ್ರಕರಣಗಳು ದಾಖಲಾದರೂ ಎಷ್ಟು ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಲಾಗತ್ತಿದೆ ಎಂದು ಕಾಲ ಕಾಲಕ್ಕೆ ಮೇಲ್ವಿಚಾರಣೆ ಮಾಡಲು ಆಗುತ್ತಿರಲಿಲ್ಲ. ಆನ್ ಲೈನ್ ಎಫ್.ಐ.ಆರ್. ವ್ಯವಸ್ಥೆ ಜಾರಿ ಆದ ಮೇಲೆ ಎಷ್ಟು ಪ್ರಕರಣದಲ್ಲಿ ಚಾರ್ಜ್ ಶೀಟ್ ಹಾಕಲಾಗಿದೆ, ಇಲ್ಲ ಎಂಬುದು ತಿಳಿಯುತ್ತದೆ. ಇದನ್ನು ಇಲಾಖೆಯ ಅಧಿಕಾರಿಗಳು ತಾವು ಕುಳಿತ ಜಾಗದಿಂದಲೇ ಎಲ್ಲ ವಲಯಗಳ ಅರಣ್ಯ ಅಪರಾಧ ಪ್ರಕರಣಗಳ ಬಗ್ಗೆ ನಿಗಾ ಇಡಬಹುದು ಎಂದರು.
ಅರಣ್ಯ ಅಪರಾಧ ಕುರಿತಂತೆ ದೂರು ಕೊಟ್ಟವರಿಗೆ ಎಫ್.ಐ.ಆರ್. ಪ್ರತಿ ಲಭಿಸಲಿದೆ, ಜೊತೆಗೆ ಜಾರ್ಜ್ ಶೀಟ್ ಹಾಕಲಾಗಿದೆಯೋ ಇಲ್ಲವೋ ಎಂಬುದನ್ನು ತಿಳಿಯಲು ಅವಕಾಶ ಆಗುತ್ತದೆ. ಚಾರ್ಜ್ ಶೀಟ್ ಸಲ್ಲಿಕೆ ಆದ ಕೂಡಲೇ ನ್ಯಾಯಾಲಯದಲ್ಲಿ ಅಪರಾಧ ಸಂಖ್ಯೆ (ಸಿಸಿ ನಂಬರ್) ದಾಖಲಾಗುತ್ತದೆ, ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ ಎಂದು ವಿವರಿಸಿದರು.
ಅರಣ್ಯ ಭೂಮಿ ಒತ್ತುವರಿ, ಅಕ್ರಮ ಮರ ಕಡಿತಲೆ, ವನ್ಯಜೀವಿಗಳ ಅಕ್ರಮ ಬೇಟೆಗೆ ಸಂಬಂಧಿಸಿದಂತೆ ಆನ್ ಲೈನ್ ಎಫ್.ಐ.ಆರ್. ಹಾಕಿದರೆ, ಚಾರ್ಜ್ ಶೀಟ್ ಹಾಕಲೇ ಬೇಕಾಗತ್ತದೆ. ಲಾಂಗ್ ಪೆಂಡೆನ್ಸಿ ಇರಲು ಸಾಧ್ಯವಿಲ್ಲ. ಈ ಬಗ್ಗೆ ಹೈಕೋರ್ಟ್ ಕೂಡ ಸೂಚನೆ ನೀಡುತ್ತದೆ. ಇದರಿಂದ ಭೂ ಕಬಳಿಕೆದಾರರಿಗೆ ಶಿಕ್ಷೆಯಾಗಲಿದೆ ಎಂದರು.
ವಲಯ ಅರಣ್ಯಾಧಿಕಾರಿ (ಆರ್.ಎಫ್.ಓ.)ಗಿಂತ ಕಡಿಮೆ ದರ್ಜೆಯ ಅಧಿಕಾರಿಗಳು ಈ ಹಿಂದೆ ಎಫ್.ಐ.ಆರ್. ಹಾಕುತ್ತಿದ್ದರು. ತಾಂತ್ರಿಕ ಕಾರಣದ ಮೇಲೆ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗುತ್ತಿತ್ತು. ಇನ್ನು ಮುಂದೆ ಹಾಗೆ ಆಗಲು ಸಾಧ್ಯವಿರುವುದಿಲ್ಲ. ಈ ತಂತ್ರಾಂಶದಲ್ಲಿ ಆರ್.ಎಫ್.ಓ. ಡಿಜಿಟಲ್ ಸಹಿ ಇರುತ್ತದೆ ಎಂದರು.
ಅರಣ್ಯ ಭೂಮಿ ತನ್ನ ಸ್ವರೂಪ ಕಳೆದುಕೊಂಡಿದ್ದರೂ ಮತ್ತೆ ಅರಣ್ಯ ಬೆಳೆಸಬಹುದು. ಆದರೆ ಅರಣ್ಯಕ್ಕೆ ಭೂಮಿಯೇ ಇಲ್ಲದಿದ್ದರೆ ಅರಣ್ಯ ಬೆಳೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅರಣ್ಯ ಒತ್ತುವರಿ ಆಗದಂತೆ ತಡೆಯಲು ಆನ್ ಲೈನ್ ಎಫ್.ಐ.ಆರ್. ಕ್ರಾಂತಿಕಾರಿ ಹೆಜ್ಜೆಯಾಗುತ್ತದೆ.
ಪ್ರಯೋಜನ:
ಈ ತಂತ್ರಾಂಶದಲ್ಲಿ ಪ್ರಕರಣಗಳ ದಾಖಲಿಸುವಿಕೆ, ತನಿಖೆ ಮತ್ತು ಅಂತಿಮ ನಿರ್ಣಯದವರೆಗಿನ ಪ್ರತಿ ಹಂತವನ್ನು ನಿರ್ವಹಿಸಲು ಆಸ್ಪದ ಕಲ್ಪಿಸಲಾಗಿದ್ದು ಪ್ರಕರಣಗಳ ನಿರ್ವಹಣೆಗೆ ಸಂಬಂಧಿಸಿದ ಪ್ರಗತಿಯನ್ನು ಉಸ್ತುವಾರಿ ಮಾಡಲು ಸಹಕಾರಿಯಾಗಿರುತ್ತದೆ. ಪ್ರಕರಣಗಳ ನಿರ್ವಹಣೆಯಲ್ಲಿ ದಾಖಲಿಸಬೇಕಿರುವ ಮತ್ತು ಸಲ್ಲಿಸಬೇಕಿರುವ ವಿವಿಧ ವರದಿ ಮತ್ತು ನಮೂನೆಗಳನ್ನು ತಂತ್ರಾಂಶದಲ್ಲಿ ಸ್ವಯಂ ಸೃಜನೆಗೊಳ್ಳುವಂತೆ (Auto generate) ಅಭಿವೃದ್ಧಿಪಡಿಸಲಾಗಿದ್ದು, ಅಧಿಕಾರಿಗಳು ತ್ವರಿತವಾಗಿ, ವಿಳಂಬವಿಲ್ಲದೇ ಕಾರ್ಯ ನಿರ್ವಹಿಸಲು ಅನುವು ಮಾಡಿರುತ್ತದೆ. ಈ ಬಳಕೆದಾರ-ಸ್ನೇಹಿ (user friendly) ಉಪಕ್ರಮವು ಅರಣ್ಯ ಕಾನೂನು ಜಾರಿ ಮತ್ತು ಸಂರಕ್ಷಣೆಗೆ ಸಂಬಂಧಿಸಿದ ವಿವಿಧ ಪ್ರಕ್ರಿಯೆಗಳನ್ನು ಪಾರದರ್ಶಕವಾಗಿ ಟ್ರ್ಯಾಕಿಂಗ್ ಮಾಡಲು ಅವಕಾಶವಿರುವ ಸಿಸ್ಟಮ್ ಆಗಿದ್ದು ಇಲಾಖೆಯ ಕಾರ್ಯಾಚರಣೆಗಳನ್ನು ಆಧುನೀಕರಿಸಲು ಮತ್ತು ಉತ್ತಮಗೊಳಿಸಲು ಹೆಚ್ಚು ಪರಿಣಾಮಕಾರಿಯಾದ ಪರಿಹಾರವಾಗಿದೆ.
ಚಾಲ್ತಿಯಲ್ಲಿರುವ ಪ್ರಕರಣಗಳು ಮತ್ತು ಹೊಸದಾಗಿ ದಾಖಲಿಸಲ್ಪಡುವ ಪ್ರಕರಣಗಳನ್ನು ನಿರ್ವಹಿಸಲು ಮತ್ತು ಇವುಗಳಿಂದ ಸೃಜನೆಯಾಗುವ ದತ್ತಾಂಶಗಳ ವಿಶ್ಲೇಷಣೆಗಳನ್ನು ಪಡೆಯಲು ಗರುಡಾಕ್ಷಿಯಲ್ಲಿ
• Legacy Case Registration Module
• Online Forest Offence Registration
• Investigation Module
• Reporting and Analytics Module
ಎಂಬ ಮಾಡ್ಯೂಲ್ ಅಳವಡಿಸಲಾಗಿದೆ. ಇಲಾಖೆಯ ವಿವಿಧ ಘಟಕಗಳಲ್ಲಿ ಈಗಾಗಲೇ ದಾಖಲಿಸಲಾಗಿರುವ ಹಾಗೂ ಹಾಲಿ ಚಾಲ್ತಿಯಲ್ಲಿರುವ ಪ್ರಕರಣಗಳನ್ನು ಗಣಕೀಕರಿಸಲು ಮೊದಲ ಹಂತದಲ್ಲಿ ಕ್ರಮಕೈಗೊಳ್ಳಲಾಗಿದ್ದು, “Legacy Module” ಅನ್ನು ಜಾರಿ ಮಾಡಲಾಗಿರುತ್ತದೆ ಮತ್ತು ಪ್ರಕರಣಗಳನ್ನು ಗಣಕೀಕರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ, ಈಗಾಗಕೆ 40000 ಪ್ರಕರಣದ ದಾಖಲೀಕರಣ ಆಗಿದೆ ಎಂದು ತಿಳಿಸಿದರು.
ಇದರ ಮುಂದಿನ ಹೆಗ್ಗುರುತಾಗಿ Online Forest Offence Registration ಮಾಡ್ಯೂಲ್ ಅನ್ನು ಅಭಿವೃದ್ಧಿಪಡಿಸಲಾಗಿದ್ದು ಇದರಡಿ ಅರಣ್ಯ/ವನ್ಯಜೀವಿ ಅಪರಾಧ ಪ್ರಕರಣಗಳನ್ನು ಆನ್ ಲೈನ್ ಮೂಲಕ ದಾಖಲಿಸಲು, ನ್ಯಾಯಾಲಯದ ಅನುಮತಿಗಳನ್ನು ಪಡೆಯಲು, ಜಪ್ತಿಗಳನ್ನು ನಿರ್ವಹಿಸಲು, ಆಪಾದಿತರ ದಸ್ತಗಿರಿ ಚರ್ಯೆಗಳನ್ನು ದಾಖಲಿಸಲು ಅವಕಾಶವಿರುತ್ತದೆ ಎಂದರು. Live Offence Registration Module ನಿಯೋಜನೆಯೊಂದಿಗೆ ತನಿಖೆ (Investigation) ಮತ್ತು ವರದಿ ಹಾಗೂ ವಿಶ್ಲೇಷಣೆ (Reporting and Analytics) ಮಾಡ್ಯೂಲ್‌ಗಳನ್ನು ಕೂಡ ಅಭಿವೃದ್ಧಿಪಡಿಸಿ ನಿಯೋಜಿಸಲು ಹಂತ ಹಂತವಾಗಿ ಕ್ರಮಕೈಗೊಳ್ಳಲು ಉದ್ದೇಶಿಸಲಾಗಿದೆ.
ಜೊತೆಗೆ ಅರಣ್ಯ ಅಪರಾಧಗಳ ಕುರಿತಂತೆ ಸಾರ್ವಜನಿಕರು ತಮ್ಮ ಮೊಬೈಲ್ ಸಂಖ್ಯೆ ಅಥವಾ ಇ-ಮೇಲ್ ವಿಳಾಸದೊಂದಿಗೆ ಲಾಗ್ಇನ್ ಆಗಿ ಆನ್ ಲೈನ್ ಮೂಲಕವೇ ದೂರು ದಾಖಲಿಸಲೂ ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ.
ಯಾವ ವಲಯದಲ್ಲಿ ಹೆಚ್ಚು ಆನ್ ಲೈನ್ ಎಫ್.ಐ.ಆರ್. ದಾಖಲಿಸಿ, ನಿಗದಿತ ಕಾಲಮಿತಿಯೊಳಗೆ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸುತ್ತಾರೋ ಆ ವಲಯದ ಆರ್.ಎಫ್.ಓ.ಗಳಿಗೆ ಬಡ್ತಿ ನೀಡುವಾಗ, ಇದನ್ನು ದಕ್ಷತೆಯ ಮಾನದಂಡವಾಗಿ ಪರಿಗಣಿಸಲೂ ಅನುಕೂಲವಾಗಲಿದೆ ಎಂದು ತಿಳಿಸಿದರು.