ಹಾಸನ: ದಾನ ಕೇಳುವ ನೆಪದಲ್ಲಿ ಸ್ವಾಮೀಜಿಗಳ ವೇಷದಲ್ಲಿ ಬಂದಿದ್ದ ಕಳ್ಳರು ಒಂಟಿ ಮನೆಯಲ್ಲಿ ದರೋಡೆಗೆ ಯತ್ನಿಸಿದ ಘಟನೆ ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿಯ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ನಾವು ಜೇನುಕಲ್ ಸಿದ್ದೇಶ್ವರ ಸ್ವಾಮಿ ಮಠದವರಾಗಿದ್ದು, ಹೆಚ್ಚಿನ ಧನ ಸಹಾಯ ಮಾಡಿ ಎಂದು ಒಂಟಿ ಮನೆಗೆ ಬಂದ ಸ್ವಾಮೀಜಿಗಳು ಬಲವಂತ ಮಾಡಿದ್ದಾರೆ. ಏಕಾಏಕಿ ಮನೆಗೆ ನುಗ್ಗಿ ಭಿಕ್ಷೆ, ದಾನ ಕೊಡುವಂತೆ ಕೇಳಿದ್ದು, ಹೆಚ್ಚಿನ ಹಣ ಕೊಡುವಂತೆ ಬೇಡಿಕೆ ಇಟ್ಟಾಗ ಮನೆಯಲ್ಲಿದ್ದ ಮಹಿಳೆ ಅನುಮಾನಗೊಂಡು ಫೋನ್ ಮಾಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದಾರೆ.
ಗ್ರಾಮಸ್ಥರು ಬರುತ್ತಿದ್ದಂತೆ ಸ್ವಾಮೀಜಿಗಳು ಪರಾರಿಯಾಗಲು ಯತ್ನಿಸಿದ್ದು, ಇಬ್ಬರು ನಕಲಿ ಸ್ವಾಮೀಜಿ ಸೇರಿ ಐವರನ್ನು ಹಿಡಿದು ಗ್ರಾಮಸ್ಥರು ಥಳಿಸಿ ಬಾಣಾವರ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಇವರು ಕಡೂರು ತಾಲೂಕಿನ ಸಿದ್ದಾಪುರ ಗ್ರಾಮದವರು ಎನ್ನಲಾಗಿದ್ದು, ವಿಚಾರಣೆ ನಡೆಸಿ ಪೊಲೀಸರು ಬಿಟ್ಟು ಕಳಿಸಿದ್ದಾರೆ ಎನ್ನಲಾಗಿದೆ.