ನವದೆಹಲಿ: ಪ್ರಿಯಾಂಕಾ ಗಾಂಧಿ ಕೆನ್ನೆಯ ರೀತಿ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿಕೆ ನೀಡಿದ್ದ ಬಿಜೆಪಿಯ ಹಿರಿಯ ನಾಯಕ ಮತ್ತು ಕಲ್ಕಾಜಿ ಪಕ್ಷದ ಅಭ್ಯರ್ಥಿ ರಮೇಶ್ ಬಿಧುರಿ ಅವರು ತಮ್ಮ ಹೇಳಿಕೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆ ಕ್ಷಮೆಯಾಚಿಸಿದ್ದಾರೆ.
ಮುಂದಿನ ತಿಂಗಳು ದೆಹಲಿಯಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ “ಕೆನ್ನೆ” ಯಂತೆ ಕ್ಷೇತ್ರದಲ್ಲಿ ಸುಗಮ ರಸ್ತೆಗಳನ್ನು ಅಭಿವೃದ್ಧಿಪಡಿಸುವುದಾಗಿ ಹೇಳಿದ್ದರು.
ಓಖ್ಲಾ ಮತ್ತು ಸಂಗಮ್ ವಿಹಾರ್‌ನಲ್ಲಿ ನಾವು ರಸ್ತೆಗಳನ್ನು ಮಾಡಿದಂತೆಯೇ, ಕಲ್ಕಾಜಿಯ ಎಲ್ಲಾ ರಸ್ತೆಗಳನ್ನು ಪ್ರಿಯಾಂಕಾ ಗಾಂಧಿಯವರ ಕೆನ್ನೆಯಂತೆ ಮಾಡುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಅವರು ನೀಡಿದ ಹೇಳಿಕೆಯ ವಿಡಿಯೋ ವೈರಲ್ ಆಗಿತ್ತು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
ಕಲ್ಕಾಜಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಲ್ಕಾ ಲಂಬಾ ಅವರು, ಅಸಭ್ಯ ಭಾಷೆಯಲ್ಲಿ ಮತ್ತೊಮ್ಮೆ ಮಹಿಳೆಯರನ್ನು “ಅವಮಾನಿಸಿದ್ದಾರೆ” ಎಂದು ಆರೋಪಿಸಿದ್ದರು. ಬಿಧುರಿ ಅವರ ಹೇಳಿಕೆಗೆ ಸಾರ್ವಜನಿಕ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದರು.
ವಿವಾದ ಉಲ್ಬಣಗೊಳ್ಳುತ್ತಿರುವುದನ್ನು ಗಮನಿಸಿದ ಬಿಧುರಿ ಅವರು ಕ್ಯಾಮರಾ ಮುಂದೆ ಕ್ಷಮೆಯಾಚಿಸಿದರು. ಯಾರ ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲ. ಲಾಲು ಯಾದವ್ ಅವರ ಹಿಂದಿನ ಹೇಳಿಕೆಗಳಿಂದ ನಾನು ಉಲ್ಲೇಖ ಪಡೆದು ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆಯಿಂದ ಯಾರಿಗಾದರೂ ನೋವಾಗಿದ್ದರೆ, ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನನ್ನ ಮಾತುಗಳನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.
#WATCH | Delhi |”…I have said that in the context of what Lalu Yadav had said. Congress remained silent on that even when he (Lalu Yadav) was a minister in their govt… If anyone is hurt by my remark, I express regret over it and I take my words back…” says Ramesh Bidhuri,… pic.twitter.com/EHj8VPhLyZ
— ANI (@ANI) January 5, 2025