ಬೆಂಗಳೂರು: ವರಾಹಿ ಜ್ಯುವೆಲ್ಲರಿ ಶಾಪ್ ಮಾಲಕಿ ವನಿತಾ ಅವರಿಗೆ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯಾ ಗೌಡ ಮತ್ತು ಆಕೆಯ ಪತಿ ಹರೀಶ್ ಗೌಡ ಅವರನ್ನು ಚಂದ್ರಾ ಲೇಔಟ್ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಧೀಶರ ಎದುರು ಹಾಜರುಪಡಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದ ಎನ್‌ಜಿವಿಯಲ್ಲಿರುವ ಜಡ್ಜ್ ನಿವಾಸದಲ್ಲಿ ಇಬ್ಬರನ್ನು ಹಾಜರುಪಡಿಸಲಾಗಿದ್ದು, ಇಬ್ಬರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿ ನ್ಯಾಯಾಧೀಶರು ಆದೇಶಿಸಿದ್ದಾರೆ. ಬಂಧಿತ ಐಶ್ವರ್ಯಾ ಗೌಡ ದಂಪತಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದಾರೆ.
ಆರೋಪಿಗಳನ್ನು ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಸೋಮವಾರ ಓಪನ್ ಕೋರ್ಟ್ ನಲ್ಲಿ ಈ ಬಗ್ಗೆ ಮನವಿ ಸಲ್ಲಿಸಲಿದ್ದಾರೆ.
ಇನ್ನು ಪ್ರಕರಣದಲ್ಲಿ ನಟ ಧರ್ಮ ವಿರುದ್ಧವೂ ಕೇಸ್ ದಾಖಲಾಗಿದ್ದು, ಅವರು ನಾಪತ್ತೆಯಾಗಿದ್ದಾರೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.