ಬೆಂಗಳೂರು: ಭಯೋತ್ಪಾದಕ ಕೃತ್ಯಗಳಿಗೆ ಸ್ಪೋಟಕ ಪೂರೈಸಿದ ಭಟ್ಕಳದ ಉಗ್ರ ಹೋಮಿಯೋಪತಿ ವೈದ್ಯ ಡಾ. ಸೈಯದ್ ಇಸ್ಮಾಯಿಲ್ ಅಫಾಕ್ ಗೆ ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಇದೇ ಪ್ರಕರಣದಲ್ಲಿ ಅಪರಾಧಿಗಳಾಗಿರುವ ಅಬ್ದುಲ್ ಸಬೂರ್ ಮತ್ತು ಸದ್ದಾಂ ಹುಸೇನ್ ಅವರಿಗೆ ತಲಾ 10 ವರ್ಷ ಶಿಕ್ಷೆ ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಇಂಡಿಯನ್ ಮುಜಾಹಿದ್ದಿನ್ ಉಗ್ರ ಸಂಘಟನೆ ದೇಶದಲ್ಲಿ ಎಸಗಿದ್ದ ವಿಧ್ವಂಸಕ ಕೃತ್ಯಗಳಿಗೆ ಈ ಮೂವರು ಉಗ್ರರು ಸ್ಫೋಟಕ ಸಾಮಗ್ರಿ ಪೂರೈಸಿರುವುದು ಎನ್ಐಎ ತನಿಖೆಯಲ್ಲಿ ದೃಢಪಟ್ಟಿತ್ತು.
ಇತ್ತೀಚೆಗಷ್ಟೇ ಮೂವರನ್ನು ಅಪರಾಧಿಗಳೆಂದು ನ್ಯಾಯಾಲಯ ಘೋಷಿಸಿತ್ತು. ಮಂಗಳವಾರ ಶಿಕ್ಷೆ ಪ್ರಮಾಣ ನಿಗದಿಪಡಿಸಿ ಆದೇಶ ಹೊರಡಿಸಲಾಗಿದೆ. ಅಫಾಕ್ ಗೆ 1.55 ಲಕ್ಷ ರೂ., ಸಬೂರ್ ಮತ್ತು ಹುಸೇನ್ ಗೆ ತಲಾ 25 ಸಾವಿರ ರೂ. ದಂಡ ವಿಧಿಸಲಾಗಿದೆ.
2015ರಲ್ಲಿ ಬೆಂಗಳೂರಿನ ಪುಲಿಕೇಶಿ ನಗರ, ಭಟ್ಕಳದಲ್ಲಿ ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು. ಬಂಧಿತರಿಂದ ಅಪಾರ ಪ್ರಮಾಣದ ಸ್ಪೋಟಕ ವಸ್ತುಗಳನ್ನು ಜಪ್ತಿ ಮಾಡಲಾಗಿತ್ತು. ಪಾಕಿಸ್ತಾನದಿಂದ ಬಂದ ಸೂಚನೆಯಂತೆ ಇವರು ಸ್ಪೋಟಕ್ಕೆ ಸಂಚು ರೂಪಿಸಿದ್ದರು. 20015ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಭೇಟಿ ನೀಡಿದ್ದ ವೇಳೆ ಸ್ಪೋಟ ನಡೆಸಲು ಸಂಚುರೂಪಿಸಿದ್ದರು.