ದಾವಣಗೆರೆ: ನಗರದಲ್ಲಿ ಈಗಾಗಲೇ ಮಳೆ ನೀರು ಕೊಯ್ಲು ಕಡ್ಡಾಯವಾಗಿದೆ. ಆದರೂ ಬಹಳಷ್ಟು ಮನೆಗಳಲ್ಲಿ ಅಳವಡಿಸಿಕೊಂಡಿರುವುದಿಲ್ಲ, ಇದು ನೀರಿನ ಅಭಾವದ ಜೊತೆಗೆ ಅಂತರ್ಜಲಮಟ್ಟ ಕುಸಿತವಾಗಲು ಕಾರಣವಾಗಿದ್ದು, ಕಟ್ಟಡಗಳಲ್ಲಿ ಮಳೆ ನೀರು ಕೊಯ್ಲು ವಿಧಾನವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕೆಂದು ಮಹಾನಗರ ಪಾಲಿಕೆ ಆಯುಕ್ತರಾದ ರೇಣುಕ ತಿಳಿಸಿದ್ದಾರೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸುತ್ತಿರುವುದು ಹಾಗೂ ಕಟ್ಟಡದ ಮಾಲೀಕರು ಕಟ್ಟಡದಲ್ಲಿ ಮಳೆ ನೀರು ಕೊಯ್ಲಿನ ವಿಧಾನವನ್ನು ಅಳವಡಿಸದೇ ಇರುವುದು ಕಂಡುಬಂದಿದ್ದು, ಅಂತಹ ಕಟ್ಟಡದ ಮಾಲೀಕರಿಗೆ ದಂಡ ವಿಧಿಸಲಾಗುವುದು.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ದೊಡ್ಡ ಮನೆಗಳಿಗೆ(40*60 ಅಡಿ ಮೇಲ್ಪಟ್ಟ ನಿವೇಶನಗಳಲ್ಲಿನ ಕಟ್ಟಡ/ಜಿ+2 ಕಟ್ಟಡ) 10,000 ರೂ ಹಾಗೂ ಚಿಕ್ಕಮನೆಗಳಿಗೆ 5,000 ರೂ ರಂತೆ ದಂಡವನ್ನು ಕಟ್ಟಡದ ಮಾಲೀಕರಿಂದ ಪಾವತಿಸಿಕೊಳ್ಳಲಾಗುತ್ತದೆ ಎಂಬ ಸೂಚನೆ ಕೊಟ್ಟಿದ್ದಾರೆ.
ನಗರ ಯೋಜನೆ ಶಾಖೆಯಿಂದ ಎಲ್.ಬಿ.ಪಿ.ಎ.ಎಸ್ ಆನ್ ಲೈನ್ ತಂತ್ರಾಂಶದಲ್ಲಿ ಕಟ್ಟಡ ಪರವಾನಿಗೆ ಅರ್ಜಿಗಳನ್ನು ಸ್ವೀಕರಿಸಿ ವಸತಿ, ವಾಣಿಜ್ಯ, ಕೈಗಾರಿಕೆ ಹಾಗೂ ಇತರೆ ಉದ್ದೇಶದ ಕಟ್ಟಡ ನಿರ್ಮಿಸಲು ಕಟ್ಟಡ ಪರವಾನಿಗೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.