ಕಲಬುರಗಿ: ಶಾಲಾ ಬಸ್ ಗೆ ಮಗುವನ್ನು ಹತ್ತಿಸುತ್ತಿದ್ದ ವೇಳೆ ಕರೆಂಟ್ ಶಾಕ್ ಹೊಡೆದು ತಾಯಿ-ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಲಬುರಗಿ ನಗರದ ಮೋಹನ್ ಲಾಡ್ಜ್ ಮುಂಭಾಗ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ಮಹಿಳೆ ಭಾಗ್ಯಶ್ರೀಯನ್ನು ಕಲಬುರಗಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ. ಭಾಗ್ಯಶ್ರೀ ತಮ್ಮ ಬುದ್ಧಿಮಾಂದ್ಯ ಮಗುವನ್ನು ಶಾಲೆಗೆ ಕಳುಹಿಸಲು ಶಾಲ ವಾಹನ ಹತ್ತಿಸಲು ಬಂದಿದ್ದರು. ಶಾಲಾ ವಾಹನಕ್ಕೆ ಮಗು ಹತ್ತಿಸುತ್ತಿದ್ದ ವೇಳೆ ತುಂಡಾಗಿ ರಸ್ತೆಯಲ್ಲಿ ಬಿದ್ದಿದ್ದ ವಿದ್ಯುತ್ ತಂತಿ ಅವರ ಕಾಲಿಗೆ ತಗುಲಿದೆ. ಕರೆಣ್ಟ್ ಶಾಕ್ ಹೊಡೆದು ರಸ್ತೆಯಲ್ಲಿಯೇ ತಾಯಿ, ಮಗು ಬಿದ್ದಿದ್ದಾರೆ.
ಭಾಗ್ಯಶ್ರೀ ಅವರಿಗೆ ಕೈ-ಕಾಲು, ಹೊಟ್ಟೆಯ ಭಾಗ ಸುಟ್ಟು ಹೋಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಭಾಗ್ಯಶ್ರೀ ಸ್ಥಿತಿ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. 11 ವರ್ಷದ ಮಗ ಆಯುಷ್ ಗೂ ಸುಟ್ಟ ಗಾಯಗಳಾಗಿವೆ.
ಜೆಸ್ಕಾಂ ನಿರ್ಲಕ್ಷ್ಯವೇ ಘಟನೆಗೆ ಕಾರಣ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.