ಮಂಗಳೂರು: ಲೋಕಾಯುಕ್ತ ಎಂದು ಹೇಳಿಕೊಂಡು ಪುರಸಭೆ ಕಂದಾಯ ಅಧಿಕಾರಿಗಳಿಗೆ ಹಣಕ್ಕೆ ಬೇಡಿಕೆ ಇಟ್ಟಿದ್ದ ನಕಲಿ ಅಧಿಕಾರಿಯನ್ನು ಮಂಗಳೂರಿನ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಧನಂಜಯ್ ರೆಡ್ಡಿ ತೋಟ ಬಂಧಿತ ಆರೋಪಿ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆಯ ನಲ್ಲಗುಟ್ಲಪಲ್ಲಿ ಗ್ರಾಮದವನು. ಆರೋಪಿ ಧನಂಜಯ್, ಸೋಮೇಶ್ವರ ಪುರಸಭೆಯ ಕಂದಾಯ ಅಧಿಕಾರಿ ಪುರುಷೋತ್ತಮ ಅವರಿಗೆ ವಾಟ್ಸಪ್ ಕರೆ ಮಾಡಿ ತಾನು ಲೋಕಾಯುಕ್ತ ಅಧಿಕಾರಿ. ನಿಮ್ಮ ಮೇಲೆ ಆರೋಪಗಳಿವೆ. ನಮ್ಮ ಟೆಕ್ನಿಕಲ್ ಟೀಂ ನಿಮ್ಮ ಕಚೇರಿಗೆ ಬರುವ ಮೊದಲು ಆರೋಪ ಸರಿಪಡಿಸಲು ಹಣ ನೀಡಬೇಕು ಎಂದು ಬೇಡಿಕೆಯೊಡ್ಡಿದ್ದ.
ಆರೋಪಿ ಕರೆ ಮಾಡಿದ್ದ ನಂಬರ್ ಚೆಕ್ ಮಾಡಿದಾಗ ಟ್ರೂ ಕಾಲರ್ ನಲ್ಲಿಯೂ ಡಿ.ಪ್ರಭಾಕರ ಲೋಕಾಯುಕ್ತ ಪಿಐ ಎಂದು ಬಂದಿತ್ತು. ಈ ಬಗ್ಗೆ ಪುರುಷೋತ್ತಮ ಅವರು ಮಂಗಳೂರು ಲೋಕಾಯುಕ್ತ ಕಚೇರಿಗೆ ಕರೆ ಮಾಡಿ ವಿಚಾರಿಸಿದ್ದರು. ಈ ವೇಳೆ ಅಂತಹ ಹೆಸರಿನ ಯಾವುದೇ ಅಧಿಕಾರಿಯಾಗಲಿ, ಸಿಬ್ಬಂದಿಯಾಗಲಿ ಇಲ್ಲ ಎಂದು ತಿಳಿದುಬಂದಿತ್ತು.
ಪುರುಷೋತ್ತಮ ಅವರ ಕಚೇರಿಯ ಆರೋಗ್ಯ ನಿರೀಕ್ಷಕಿ ಲಿಲ್ಲಿ ನಾಯರ್, ಆರೋಗ್ಯ ನಿರೀಕ್ಷಕ ಕೃಷ್ಣ ಆರ್.ಅವರಿಗೂ ಇದೇ ರೀತಿ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ನಕಲಿ ಲೋಕಾಯುಕ್ತ ಅಧಿಕಾರಿಯನ್ನು ಪೊಲೀಸರು ಬಂಧಿಸಿದ್ದಾರೆ.