ಚಿಕ್ಕಮಗಳೂರು: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದಲ್ಲಿ ಬಂಧಿತರಾಗಿ ಬಿಡುಗಡೆಯಾಗಿ ಚಿಕ್ಕಮಗಳೂರಿಗೆ ಆಗಮಿಸಿದ್ದ ವಿಧಾನಪರಿಷತ್ ಬಿಜೆಪಿ ಸದಸ್ಯ ಸಿ.ಟಿ. ರವಿಯವರಿಗೆ ಅದ್ದೂರಿ ಸ್ವಾಗತ ನೀಡಲಾಗಿದೆ.
ಸಿ.ಟಿ. ರವಿ ಚಿಕ್ಕಮಗಳೂರಿಗೆ ಬಂದಾಗ ಸ್ವಾಗತ ಕೋರಲು ಹೋಗಿದ್ದ 7 ಖಾಸಗಿ ಆಂಬುಲೆನ್ಸ್ ಗಳ ವಿರುದ್ಧ ನಿಯಮ ಉಲ್ಲಂಘನೆ ಆರೋಪದಡಿ ಚಿಕ್ಕಮಗಳೂರು ನಗರ ಠಾಣೆ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.
ಶನಿವಾರ ರಾತ್ರಿ ಸಿ.ಟಿ. ರವಿ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಬೈಕ್, ಕಾರ್ ಮತ್ತಿತರ ವಾಹನಗಳಲ್ಲಿ ಮಾಗಡಿ ಕೈಮರಕ್ಕೆ ಹೋಗಿ ಸ್ವಾಗತಿಸಿದ್ದಾರೆ. ರವಿಯವರನ್ನು ಕರೆತರುವ ಸಂದರ್ಭದಲ್ಲಿ 7 ಆಂಬುಲೆನ್ಸ್ ಗಳು ಕೂಡ ಬಂದಿವೆ. ಆಂಬುಲೆನ್ಸ್ ನಲ್ಲಿ ಯಾವುದೇ ರೋಗಿ ಇಲ್ಲದಿದ್ದರೂ ಜೋರಾಗಿ ಸೈರನ್ ಜೊತೆಗೆ ಟಾಪ್ ರೆಡ್ ಲೈಟ್ ಹಾಕಿಕೊಂಡು ಬಂದಿದ್ದವು. ಇದರಿಂದ ಸಾರ್ವಜನಿಕರಿಗೆ ಕಿರಿಕಿರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಆಂಬುಲೆನ್ಸ್ ಗಳ ವಿರುದ್ಧ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.