ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಅಪರೂಪದ ಮತ್ತು ದುಬಾರಿ ವೆಚ್ಚದ 17 ಕಾಯಿಲೆಗಳ ಚಿಕಿತ್ಸೆ ವೆಚ್ಚವನ್ನು ಕಾರ್ಪಸ್ ಫಂಡ್ ಸ್ಥಾಪಿಸಿ ಭರಿಸುವ ಯೋಜನೆ ಜಾರಿಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನಲ್ಲಿ ಪರಿಶಿಷ್ಟರ ಕಲ್ಯಾಣ ಯೋಜನೆಯಡಿ ಪ್ರಸ್ತುತ ಲಭ್ಯ ಇರುವ 47 ಕೋಟಿ ರೂ. ಮೊತ್ತದಲ್ಲಿ ಕಾರ್ಪಸ್ ಫಂಡ್ ಸೃಜಿಸಲಾಗುವುದು. ಅದರ ಬಡ್ಡಿಯ ಮೊತ್ತದಿಂದ ಈ ಕಾಯಿಲೆಗಳ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ.
ವಿರಳ ಮತ್ತು ದುಬಾರಿ ವೆಚ್ಚದ 33 ಕಾಯಿಲೆಗಳಲ್ಲಿ 16 ಕಾಯಿಲೆಗಳಿಗೆ ರಾಜ್ಯ ಸರ್ಕಾರದ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ, ಜೀವ ಸಾರ್ಥಕತೆ ಮೊದಲಾದ ಯೋಜನೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಉಳಿದ 17 ಕಾಯಿಲೆಗಳ ಚಿಕಿತ್ಸಾ ವಿಧಾನ ವೆಚ್ಚವನ್ನು ಬಡ್ಡಿ ಮೊತ್ತದಲ್ಲಿ ಭರಿಸಲಾಗುವುದು ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
7 ಲಕ್ಷ ರೂಪಾಯಿ ಚಿಕಿತ್ಸಾ ವೆಚ್ಚ ತಗಲುವ ಬೋನ್ ಮ್ಯಾರೋ ಕಾಯಿಲೆ, 3.25 ಲಕ್ಷ ರೂಪಾಯಿ ಚಿಕಿತ್ಸೆ ವೆಚ್ಚದ ಆಂಜಿಯೋ ಪ್ಲಾಸ್ಟಿ, 4 ಲಕ್ಷಕ್ಕೂ ಅಧಿಕ ಮೊತ್ತದ ಹೃದಯ ಸಂಬಂಧಿ ಕಾಯಿಲೆಗಳು ಈ 17 ಕಾಯಿಲೆಗಳ ಚಿಕಿತ್ಸಾ ಪಟ್ಟಿಯಲ್ಲಿ ಸೇರಿವೆ.