ಬೆಂಗಳೂರು: 2024-25 ನೇ ಸಾಲಿನ ಪಿ.ಎಂ.ಪೋಷಣ್ ಯೋಜನೆಯಡಿ ನವೆಂಬರ್ ಡಿಸೆಂಬರ್-2024 ಮಾಹೆಗಳ ಬೇಡಿಕೆಯಂತೆ ಆಹಾರ ಧಾನ್ಯಗಳ ಟೆಂಡರ್ ಆಗಿ ಸರಬರಾಜು ಗೊಳ್ಳುವವರೆವಿಗೂ ಶಾಲೆಗಳಲ್ಲಿ ಆಹಾರ ಧಾನ್ಯಗಳ ಕೊರತೆಯಾದಲ್ಲಿ ಸ್ಥಳೀಯ ಮಾರುಕಟ್ಟೆಯಲ್ಲಿ ಖರೀದಿಸಲು ಅನುಮತಿ ನೀಡಲಾಗಿದೆ.
ಪಿ.ಎಂ.ಪೋಷಣ್ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ 1-10 ನೇ ತರಗತಿ ಮಕ್ಕಳ ಬಿಸಿಯೂಟ ತಯಾರಿಕೆಗೆ ಅಗತ್ಯವಿರುವ ತೊಗರಿಬೇಳೆ ಮತ್ತು ಸೂರ್ಯಕಾಂತಿ ಎಣ್ಣೆಯ ಖರೀದಿ ಮತ್ತು ಸರಬರಾಜಿಗೆ ಸಂಬಂಧಿಸಿದಂತೆ ನವೆಂಬರ್ ಡಿಸೆಂಬರ್-2024 ಮಾಹೆಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿರುತ್ತದೆ. ಈ ಪ್ರಕ್ರಿಯೆಯು ಮುಗಿದು ಶಾಲೆಗಳಿಗೆ ಸರಬರಾಜುಗೊಳಿಸುವವರೆವಿಗೂ ಶಾಲೆಗಳ ಮುಖ್ಯ ಶಿಕ್ಷಕರು ಬಿಸಿಯೂಟಕ್ಕೆ ಅಗತ್ಯವಿರುವ ತೊಗರಿಬೇಳೆ ಮತ್ತು ಸೂರ್ಯಕಾಂತಿ ಎಣ್ಣೆಯನ್ನು ಸ್ಥಳೀಯ ಮಾರುಕಟ್ಟೆಯಿಂದ ಈ ಕೆಳಕಂಡ ಷರತ್ತುಗಳ ಅನ್ವಯ ಖರೀದಿಸಿ ಪೂರೈಸಿಕೊಂಡು ಬಿಸಿಯೂಟ ನಿಲ್ಲದಂತೆ ಕ್ರಮವಹಿಸುವುದು.
ಪ್ರಸ್ತುತ ಶಾಲೆಗಳಿಗೆ ಬಿಡುಗಡೆಗೊಳಿಸಿ ಲಭ್ಯವಿರುವ ಅಡುಗೆ ತಯಾರಿಕಾ ವೆಚ್ಚದ ಸಂಚಿತ ಅನುದಾನದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ದರಗಳ ಮಿತಿಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸುವುದು.
ಶಾಲೆಯಲ್ಲಿ ಅಗತ್ಯವಿರುವ ಆಹಾರ ಧಾನ್ಯಗಳ ಪ್ರಮಾಣ, ಗುಣಮಟ್ಟ, ಸುರಕ್ಷತೆ ಮತ್ತು ಖರೀದಿಸುವ ದರಗಳ ಬಗ್ಗೆ, ಶಾಲಾ SDMC / SMC ರವರು ಸೂಕ್ತವಾಗಿ ಪರಿಶೀಲಿಸುವುದು.
ಶಾಲಾ SDMC / SMC ರವರ ಅನುಮತಿ ಪಡೆದು ಆಹಾರ ಪದಾರ್ಥಗಳ ಖರೀದಿ ಪ್ರಕ್ರಿಯೆಯನ್ನು ಕೈಗೊಳ್ಳುವುದು.
ಟೆಂಡರ್ ನಡೆಸಿ ಶಾಲೆಗಳಿಗೆ ಆಹಾರ ಧಾನ್ಯಗಳು ಸರಬರಾಜು ಆಗುವವರೆವಿಗೂ ವಾರಕ್ಕೆ ಒಂದು ಭಾರಿಯಂತೆ ಅಗತ್ಯವಿರುವ ಆಹಾರ ಧಾನ್ಯಗಳನ್ನು ನಿಯಮಾನುಸಾರ ಖರೀದಿಸುವುದು.
ಖರೀದಿಸಿದ ಆಹಾರ ಧಾನ್ಯಗಳಿಗೆ ಸೂಕ್ತ ಓಚರ್ ಗಳನ್ನು ದಾಖಲೆಯಾಗಿಟ್ಟು ಶಾಲೆಗಳಲ್ಲಿ ನಿರ್ವಹಿಸುವುದು. ಹಾಗೂ ಇಲಾಖಾ ಅಧಿಕಾರಿಗಳ ತಪಾಸಣಾ ಸಮಯದಲ್ಲಿ ಹಾಜರುಪಡಿಸುವುದು.
ಉತ್ತಮ ಗುಣಮಟ್ಟದ ಆಹಾರ ಧಾನ್ಯಗಳನ್ನೇ ಖರೀದಿಸಿ ಆಹಾರ ದಾಸ್ತಾನಿಗೆ ತೆಗೆದುಕೊಂಡು ದಾಸ್ತಾನು ವಹಿಯಲ್ಲಿ ಸಮರ್ಪಕವಾಗಿ ದಾಖಲಿಸಿ ನಿರ್ವಹಿಸುವುದು.
ಆಹಾರ ಧಾನ್ಯಗಳನ್ನು ಖರೀದಿಸುವಾಗ ಅನಗತ್ಯವಾಗಿ ಆಹಾರ ಧಾನ್ಯಗಳನ್ನು ಹೆಚ್ಚುವರಿಯಾಗಿ ಖರೀದಿಸಬಾರದು. ಹಾಗೂ ಅಪವ್ಯಯ ಆಗದಂತೆ ನೋಡಿಕೊಳ್ಳುವುದು ಎಂದು ಶಾಲಾ ಶಿಕ್ಷಣ ಇಲಾಖೆ ನಿರ್ದೇಶಕರಾದ ಸದಾಶಿವ ಪ್ರಭಾ ತಿಳಿಸಿದ್ದಾರೆ.