ಬಳ್ಳಾರಿ: ಗಣಿಬಾಧಿತ ಪ್ರದೇಶಗಳಲ್ಲಿ ಪರಿಸರದ ಮೇಲಿನ ದುಷ್ಪರಿಣಾಮ ತಗ್ಗಿಸಲು ತಾಲೂಕಿಗೊಂದು ವೃಕ್ಷೋದ್ಯಾನ ನಿರ್ಮಿಸಲು ಕಾರ್ಯ ಯೋಜನೆ ರೂಪಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಅವರು ಸೂಚನೆ ನೀಡಿದರು.
ಬಳ್ಳಾರಿಯ ಅರಣ್ಯ ಇಲಾಖೆ ಕಚೇರಿಯಲ್ಲಿ ಶನಿವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕರ್ನಾಟಕ ಗಣಿ ಪರಿಸರ ಪುನರ್ ಸ್ಥಾಪನೆ ನಿಗಮ (ಕೆ.ಎಂ.ಇ.ಆರ್.ಸಿ) ನಿಧಿ ಬಳಸಿಕೊಂಡು ಜೀವಿ ಪರಿಸ್ಥಿತಿಯ ಮೇಲಾಗಿರುವ ಹಾನಿ ತಗ್ಗಿಸಲು ಕ್ರಿಯಾಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಗಣಿ ಪ್ರದೇಶಗಳಲ್ಲಿ ವನ್ಯಜೀವಿ ಸಂರಕ್ಷಣೆ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಹಾಗೂ ವನ್ಯ ಜೀವಿಗಳಿಗೆ ಬೇಸಿಗೆಯಲ್ಲಿ ನೀರಿನ ಕೊರತೆ ಬಾರದಂತೆ ನೀರುಗುಂಡಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವಂತೆ ಅವರು ಸೂಚಿಸಿದರು.
ಬಳ್ಳಾರಿ ವೃತ್ತದಲ್ಲಿ ಎಷ್ಟು ಸಿ ಪ್ರವರ್ಗದ ಗಣಿಗಳಿವೆ, ಗಣಿ ಕಂಪನಿಗಳಿಗೆ ಪರಿಹಾರಾತ್ಮಕ ಅರಣ್ಯ ಬೆಳೆಸಲು ಎಷ್ಟು ಡಿಗ್ರೇಡೆಡ್ ಅರಣ್ಯ ಭೂಮಿ ನೀಡಲಾಗಿದೆ, ಎಷ್ಟು ಭೂಮಿಯಲ್ಲಿ ಪರಿಹಾರಾತ್ಮಕ ಅರಣ್ಯ ಬೆಳೆಸಲಾಗಿದೆ. ಅರಣ್ಯದಂಚಿನಲ್ಲಿ ಶ್ರೀಗಂಧ, ಬೀಟೆ, ತೇಗ ಮೊದಲಾದ ಬೆಲೆಬಾಳುವ ಮರಗಳ ಜಿಯೋ ಟ್ಯಾಗ್ ಮಾಡಲಾಗಿದೆಯೇ ಎಂಬ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದ ಅಧಿಕಾರಿಗಳನ್ನು ಸಚಿವರು ತರಾಟೆಗೆ ತೆಗೆದುಕೊಂಡರು.
ದಾವಣಗೆರೆ, ಕೊಪ್ಪಳ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ ವಿಭಾಗದಲ್ಲಿ ಹೆಚ್ಚಿನ ಸಸಿಗಳನ್ನು ನೆಟ್ಟು ಪೋಷಿಸಲು ಮತ್ತು ರೈತರ ಬೇಡಿಕೆಗೆ ಅನುಗುಣವಾಗಿ ಸಸಿಗಳನ್ನು ವಿತರಿಸಲು ನರ್ಸರಿಗಳಲ್ಲಿ ಸಸಿ ಬೆಳೆಸಲು ಹೆಚ್ಚಿನ ಮುತುವರ್ಜಿ ವಹಿಸುವಂತೆ ಸೂಚಿಸಿದರು.
ಅರಣ್ಯ ಒತ್ತುವರಿ ಬಗ್ಗೆ ನಿಗಾ ಇಡಲು ಸೂಚನೆ:
ಗುತ್ತಿಗೆ ನೀಡಿರುವ ಪ್ರದೇಶಕ್ಕಿಂತ ಹೆಚ್ಚುವರಿಯಾಗಿ ಗಣಿಗಾರಿಕೆಗೆ ಅರಣ್ಯ ಪ್ರದೇಶ ಒತ್ತುವರಿಯಾಗುತ್ತಿರುವ ಬಗ್ಗೆ ದೂರುಗಳಿದ್ದು, ಉಪಗ್ರಹ ಚಿತ್ರ ಮತ್ತು ಕೆ.ಎಂ.ಎಲ್. ನಕ್ಷೆ ಆಧರಿಸಿ ಅರಣ್ಯ ಸಂರಕ್ಷಿಸುವಂತೆಯೂ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಶಾಸಕ ಭರತರೆಡ್ಡಿ, ಅರಣ್ಯ ಸಂರಕ್ಷಣಾಧಿಕಾರಿ ಚಂದ್ರಶೇಖರ ನಾಯಕ್, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಅರ್ನಲಾನ್, ಸಂದೀಪ್ ಸೂರ್ಯವಂಶಿ, ಮಾರ್ಕಂಡೇಯ ಮತ್ತು ಜಿ.ಜೆ. ರವಿ ಮತ್ತಿತರರು ಉಪಸ್ಥಿತರಿದ್ದರು.