ಬೆಳಗಾವಿ: ಪೊಲೀಸರು ನನ್ನನ್ನು ಎನ್ಕೌಂಟರ್ ಮಾಡಲು ಸಂಚು ರೂಪಿಸಿದ್ದರು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿರುವುದಕ್ಕೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿ.ಟಿ. ರವಿ ಅವರು ಒಬ್ಬ ಶಾಸಕ, ಹೇಗೆ ಎನ್ಕೌಂಟರ್ ಮಾಡಲಾಗುತ್ತದೆ ಎಂದು ಪ್ರಶ್ನಿಸಿದ್ದಾರೆ. ತೊಂದರೆ ಕೊಡಬೇಕೆಂದು ಠಾಣೆಯಿಂದ ಠಾಣೆಗೆ ಸುತ್ತಾಡಿಸಿಲ್ಲ. ಹೋದಲ್ಲೆಲ್ಲ ಬಿಜೆಪಿ ಕಾರ್ಯಕರ್ತರು ಧರಣಿ ಶುರು ಮಾಡಿದರು. ಈ ಕಾರಣಕ್ಕೆ ಠಾಣೆಯಿಂದ ಠಾಣೆಗೆ ಸಿ.ಟಿ. ರವಿ ಕರೆದೊಯ್ದಿದ್ದಾರೆ ಎಂದು ಹೇಳಿದ್ದಾರೆ.
ತೊಂದರೆ ಆಗಬಾರದೆಂಬ ಕಾರಣಕ್ಕೆ ಖಾನಾಪುರದಿಂದ ಸ್ಥಳಾಂತರಿಸಿದ್ದಾರೆ. ರಾತ್ರಿಯೇ ಸಿ.ಟಿ. ರವಿ ಅವರನ್ನು ಕೋರ್ಟಿಗೆ ಹಾಜರುಪಡಿಸುವಂತೆ ಪೊಲೀಸರಿಗೆ ಹೇಳಿದ್ದೆ. ಯಾರ ನಿರ್ದೇಶನದ ಮೇರೆಗೆ ಸುತ್ತಾಡಿಸಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯ ಪದ ಬಳಕೆ ಮಾಡಿಲ್ಲವೆಂದು ಸಿ.ಟಿ. ರವಿ ಅವರೇ ತಿಳಿಸಿದ್ದಾರೆ. ನಾನು ಆ ಪದ ಬಳಸಿಲ್ಲ ಎಂದು ರವಿ ಹೇಳಿರುವುದರಿಂದ ಈ ಪ್ರಕರಣವನ್ನು ಮುಂದುವರಿಸುವುದರಲ್ಲಿ ಅರ್ಥವಿಲ್ಲ. ಇದನ್ನು ಇಲ್ಲಿಗೆ ಬಿಡುವುದು ಒಳಿತು ಎಂದು ಹೇಳಿದ್ದಾರೆ.